ಏಕಲವ್ಯ ಮಾದರಿ ವಸತಿ ಶಾಲೆ ಪ್ರಾಂಶುಪಾಲನ ಬಂಧನ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ

ಹನೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಮಂಗಲ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆ ಪ್ರಾಂಶುಪಾಲರನ್ನು ಹನೂರು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.
ಪ್ರಾಂಶುಪಾಲ ಲೋಕೇಶ್ ಬಂಧಿತ ಆರೋಪಿ. ಶಾಲೆಯಿಂದ ಡಿ.28ಮತ್ತು 29ರಂದು 2 ಬಸ್‌ಗಳಲ್ಲಿ ಪ್ರವಾಸ ಕೈಗೊಳ್ಳಲಾಗಿತ್ತು. ಪ್ರವಾಸದ ಅಂತಿಮ ದಿನ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತಲೆನೋವು ಎಂದಿದ್ದಾಳೆ. ಈ ಸಮಸ್ಯೆಯನ್ನು ಸ್ಟಾಫ್‌ನರ್ಸ್ ಗಮನಕ್ಕೂ ತಾರದೆ ಯಾವುದೋ ಮಾತ್ರೆಯನ್ನು ಪ್ರಾಂಶುಪಾಲ ಲೋಕೇಶ್ ವಿದ್ಯಾರ್ಥಿನಿಗೆ ನೀಡಿದ್ದಾನೆ. ಮಾತ್ರೆ ನುಂಗಿದ ವಿದ್ಯಾರ್ಥಿನಿಗೆ ನಿದ್ರೆ ಬಂದಂತಾಗಿದ್ದು, ಈ ವೇಳೆ ಆರೋಪಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ವಸತಿ ಶಾಲೆಯಲ್ಲೂ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಪ್ರವಾಸದಿಂದ ಹಿಂದಿರುಗಿದ ಬಳಿಕ ವಿದ್ಯಾರ್ಥಿನಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಇಷ್ಟಾದರೂ ಪಾಲಕರಿಗೆ ಲೈಂಗಿಕ ಕಿರುಕುಳ ಮಾಹಿತಿ ಗೊತ್ತಿರಲಿಲ್ಲ. ಆದರೆ ಈ ಬಗ್ಗೆ ಶಾಲಾ ವಿದ್ಯಾರ್ಥಿಗಳಲ್ಲಿ ಚರ್ಚೆಗಳು ನಡೆಯುತ್ತಿರುವುದು ಪಾಲಕರಿಗೆ ಮಾಹಿತಿ ತಿಳಿಯಿತು. ಈ ವಿಷಯವನ್ನು ಪಾಲಕರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಕೃಷ್ಣಪ್ಪ ಶಾಲೆಗೆ ತೆರಳಿ ಪಾಲಕರು ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದು ಲೈಂಗಿಕ ಕಿರುಕುಳ ನೀಡಿದ ವಿಚಾರ ದೃಢಪಟ್ಟ ಹಿನ್ನೆಲೆೆ ಹನೂರು ಠಾಣೆಗೆ ಪ್ರಾಂಶುಪಾಲನ ವಿರುದ್ಧ ಶುಕ್ರವಾರ ದೂರು ನೀಡಿದ್ದರು. ಪೊಲೀಸರು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶುಕ್ರವಾರ ತಡರಾತ್ರಿಯೇ ಪ್ರಾಂಶುಪಾಲ ಲೋಕೇಶನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು.
ಠಾಣೆಯಲ್ಲಿಯೂ ಹೈಡ್ರಾಮ:
ಠಾಣೆಗೆ ಕರೆತಂದ ವೇಳೆ ಸ್ಥಳದಲ್ಲಿದ್ದ ಪರಿಶಿಷ್ಟ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಕೃಷ್ಣಪ್ಪರನ್ನು ಲೋಕೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸ್ ಠಾಣೆಯ ಮೇಜಿನ ಮೇಲೆ ಹಾಕಿದ್ದ ಗಾಜನ್ನು ಕೈಯಿಂದ ಒಡೆದು ಗಾಜಿನ ಚೂರಿನಿಂದ ತಲೆಗೆ ಒಡೆದುಕೊಂಡಿದ್ದಾನೆ. ಬಳಿಕ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಆರೋಪಿಯನ್ನು ಶನಿವಾರ ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಶಿಕ್ಷಕರಿಂದ ದೂರಿನ ಪತ್ರ: ಶನಿವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಕೃಷ್ಣಪ್ಪರಿಗೆ ಶಾಲೆಯ 14 ಶಿಕ್ಷಕರು ಪ್ರಾಂಶುಪಾಲರ ನಡವಳಿಕೆಯ ಬಗ್ಗೆ ದೂರಿನ ಪತ್ರ ನೀಡಿದ್ದಾರೆ. ಪ್ರಾಂಶುಪಾಲರ ವಿರುದ್ಧವೇ ಆರೋಪ ಕೇಳಿ ಬರುತ್ತಿದ್ದರಿಂದ ತಾವು ಅಸಹಾಯಕರಾಗಿ ಯಾರಿಗೂ ತಿಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಅಂಶವನ್ನು ಪತ್ರದಲ್ಲಿ ತಿಳಿಸಿರುವುದಾಗಿ ತಿಳಿದುಬಂದಿದೆ. ಆರೋಪಿ ಲೋಕೇಶ ಕಳೆದ 2017ರ ಆಗಸ್ಟ್‌ನಲ್ಲಿ ಈ ಶಾಲೆಗೆ ಬಂದಿದು,್ದ ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಪಿರಿಯಾಪಟ್ಟಣ ಶಾಲೆಗಳಲ್ಲಿಯೂ ಈತನ ಮೇಲೆ ದೂರುಗಳು ಕೇಳಿಬಂದಿದ್ದವು.