18 ರಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮ ವ್ಯಾಪ್ತಿಯ ಸಾಗುವಳಿದಾರರು ಜಮೀನು ಪರಭಾರೆ ಮಾಡಲು ಅಗತ್ಯ ದಾಖಲೆಗಳನ್ನು ಒದಗಿಸದ ತಾಲೂಕು ಆಡಳಿತದ ಕಾರ್ಯವೈಖರಿ ಖಂಡಿಸಿ ಆ.18 ರಂದು ಭರಚುಕ್ಕಿ ಜಲಪಾತೋತ್ಸವ ಉದ್ಘಾಟನೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್, ಸತ್ತೇಗಾಲ, ಅಗ್ರಹಾರ ಹಾಗೂ ಯಡಕುರಿಯ ಗ್ರಾಮ ವ್ಯಾಪ್ತಿಯಲ್ಲಿ ಸರ್ವೇ ನಂ. 1 ರಿಂದ 2 ಸಾವಿರದವರೆಗೆ ಸುಮಾರು 3,500 ಎಕರೆ ಭೂಮಿಯಿದ್ದು, ರೈತರು 35 ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡಿದ್ದಾರೆ. ಕಳೆದ 40 ವರ್ಷಗಳ ಹಿಂದೆ ಸತ್ತೇಗಾಲ ಗ್ರಾಮ ವ್ಯಾಪ್ತಿಯ 3,500 ಕೃಷಿ ಭೂಮಿಯನ್ನು ರೈತರು ಸಾಗುವಳಿ ಮಾಡಿಕೊಂಡಿದ್ದರು. ಈ ನಡುವೆ ಸರ್ಕಾರ 1981-82ರಲ್ಲಿ ಆಯಾ ಸಾಗುವಳಿದಾರರ ಹೆಸರಿಗೆ ಎಲ್.ಆರ್.ಎಫ್. ಫಾರಂ ನಂ.2ರಂತೆ ನಿರ್ಬಂಧಿತ ಡಿಕ್ಲರೇಷನ್ ಮೂಲಕ ಹಕ್ಕುಬಾಧ್ಯತೆ ನೀಡಿತ್ತು.

ಅಂದಿನಿಂದಲೂ ಸಾಗುವಳಿ ಮಾಡಿಕೊಂಡಿರುವ ರೈತರು ಇದೀಗ ಅನಿವಾರ್ಯ ಕಾರಣದಿಂದ ತಮ್ಮ ಕೃಷಿ ಭೂಮಿಗಳನ್ನು ಇತರರಿಗೆ ಪರಭಾರೆ ಮಾಡಲು ಉಪ ವಿಭಾಗಾಧಿಕಾರಿಗಳ ಅನುಮತಿ, ಕೌಟುಂಬಿಕ ಭಾಗಾಂಶ ನೋಂದಣಿ ಮಾಡಬೇಕಾದಲ್ಲಿ 15ಕ್ಕೂ ಹೆಚ್ಚು ಅಗತ್ಯ ದಾಖಲೆಗಳ ಅವಶ್ಯಕತೆಯಿದೆ. ಆದರೆ, ನಮ್ಮ ಸಾಗುವಳಿ ಭೂಮಿಗೆ ಸೇರಿದ ರಶೀದಿ, ಕಂದಾಯ ತಿರುವಳಿ ರಶೀದಿ, ಪಿಟಿಸಿಎಲ್, ನಿರಾಪೇಕ್ಷಣಾ ಪತ್ರ ದಾಖಲೆಗಳು ಕಂದಾಯ ಇಲಾಖೆಯಲ್ಲಿ ಲಭ್ಯವಿಲ್ಲ ಎಂಬ ಉತ್ತರ ಅಧಿಕಾರಿ ವರ್ಗದಿಂದ ನಿರಂತರವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ದಾಖಲೆ ಕ್ರೋಡೀಕರಿಸಲು ಮುಂದಾದಲ್ಲಿ ವಿನಾಕಾರಣ 25 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರು ಅಳಲು ತೋಡಿಕೊಂಡರು.

ಅಧಿಕಾರಿಗಳ ವರ್ತನೆಯಿಂದ ಬೇಸತ್ತಿದ್ದು, ಪ್ರಕರಣವನ್ನು ಜಿಲ್ಲಾಧಿಕಾರಿ, ಹನೂರು ಕ್ಷೇತ್ರದ ಶಾಸಕರಾದಿಯಾಗಿ ಈ ಹಿಂದಿನ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಾಗುವಳಿದಾರರಾದ ದಳಪತಿ ನಾಗಣ್ಣ, ಎಂ.ವಸಂತಕುಮಾರ್, ನಾಗಣ್ಣ, ಯಡಕುರಿಯ ಬಸವರಾಜು, ಹುಚ್ಚೇಗೌಡ, ಆನಂದ, ವೆಂಕಟೇಶ್, ರಾಜೇಂದ್ರ, ಮರಿಸ್ವಾಮಿ, ನಾಗೇಂದ್ರ, ಸಿದ್ದೇಗೌಡ, ತಿಮ್ಮೇಗೌಡ, ಶಂಕರೇಗೌಡ, ಮಾದೇವು, ಲಕ್ಷ್ಮಣ ಹಾಜರಿದ್ದರು.

Leave a Reply

Your email address will not be published. Required fields are marked *