ಚಿಕ್ಕೋಡಿ: 27ರಂದು ಬೆಂಗಳೂರು ಚಲೋ ಕಾರ್ಯಕ್ರಮ

ಚಿಕ್ಕೋಡಿ: ಕೆಎಸ್‌ಆರ್‌ಟಿಸಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜೂ.27ರಂದು ಬೆಂಗಳೂರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಪ್ ಮತ್ತು ವರ್ಕರ್ಸ್‌ ಫೆಡರೇಷನ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅನಂತಸುಬ್ಬರಾವ್ ಹೇಳಿದ್ದಾರೆ.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿರುವ ನಾಲ್ಕು ರಸ್ತೆ ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎಂಬ ಕಾರಣ ನೀಡಿ ಸರ್ಕಾರ ನಿವೃತ್ತಿ ಹೊಂದಿದ ಸಾರಿಗೆ ನೌಕರರ ವೇತನ ನೀಡದೆ ಸತಾಯಿಸುತ್ತಿದೆ. ಹಾಗಾಗಿ ಕೂಡಲೇ ಮುಖ್ಯಮಂತ್ರಿ ನಿಗಮಕ್ಕೆ 1 ಸಾವಿರ ಕೋಟಿ ರೂ.ಹಣವನ್ನು ನೀಡಬೇಕು.

ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕ ಹಾಗೂ ನಿರ್ವಾಹಕರು ಒತ್ತಡದಿಂದ ಕೆಲಸ ಮಾಡುತ್ತಿದ್ದರೂ ಸಹ ಅವರಿಗೆ ಕಾನೂನು ಪ್ರಕಾರ ಹೆಚ್ಚವರಿ ಸೇವಾ ಭತ್ಯೆ ನೀಡುತ್ತಿಲ್ಲ. ನೌಕರರು ಕೆಲಸಕ್ಕೆ ಹಾಜರಾದರೂ ಅನೇಕ ಕಾರಣಗಳಿಂದ ಅವರನ್ನು ಕರ್ತವ್ಯದ ಮೇಲೆ ಕಳುಹಿಸುತ್ತಿಲ್ಲ.

ನಿಗಮದಲ್ಲಿ ವಾಹನಗಳಿಲ್ಲ ಎಂಬ ಕಾರಣ ನೀಡಿ ಮನೆಗೆ ಕಳುಹಿಸುತ್ತಾರೆ. ಸಾರಿಗೆ ಇಲಾಖೆ ಮೇಲಧಿಕಾರಿಗಳ ತಪಾಸಣೆ ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ಸಾರಿಗೆ ನಿರ್ವಾಹಕರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದೆ ಎಂದರು.

ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ 1.20 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲ. ಕಳೆದ ಹಲವು ವರ್ಷಗಳಿಂದ ಸಾರಿಗೆ ಇಲಾಖೆ ಮೇಲಧಿಕಾರಿಗಳ ಕಿರುಕುಳದಿಂದ ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4 ನಿಗಮಗಳ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದ್ದು, ನಿಗಮಗಳಿಗೆ ವಾಹನ ತೆರಿಗೆ ರಿಯಾಯಿತಿ, ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು.

ಹೆದ್ದಾರಿ ಟೋಲ್ ಶುಲ್ಕ ಪಡೆಯುತ್ತಿರುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿನ 4 ಸಾರಿಗೆ ನಿಗಮಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಹಾಗಾಗಿ ರಾಜ್ಯದಲ್ಲಿ ಒಂದೇ ನಿಗಮ ಮಾಡಬೇಕು ಎಂದು ಒತ್ತಾಯಿಸಿದರು.
ಕೆಎಸ್‌ಆರ್‌ಟಿಸಿ ಸ್ಟಾಪ್ ಮತ್ತು ವರ್ಕರ್ಸ್‌ ಫೆಡರೇಷನ್ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ರಾಜಗೋಪಾಲ, ಬಿ.ಎ.ಮುಕ್ಕೇರಿ ವೈ.ಆರ್.ಮಾಲವಾಡ, ಎಂ.ಎನ್.ಹೂಗಾರ, ಐ.ಎಂ.ಪಟೇಲ್, ಎ.ಕೆ.ಮಜಲಟ್ಟಿ, ನಿಸಾರ ಈಪ್ಪೇರಿ, ಇಮ್ರಾನ್ ಚಿಂಚಲಿ, ಎಸ್.ಬಿ.ಜಂಬಗಿ, ಐ.ಎಸ್.ಸಯ್ಯದ್, ಇತರರು ಇದ್ದರು.

Leave a Reply

Your email address will not be published. Required fields are marked *