More

  ಸಾಮೂಹಿಕ ವಿವಾಹಕ್ಕೆ ಕೈ ಜೋಡಿಸಿದ ಶಿಕ್ಷಕ ಚಲ್ಮಿ

  ಗೊಳಸಂಗಿ: ‘ಮದುವೆ ಮಾಡಿನೋಡು ಮನೆ ಕಟ್ಟಿನೋಡು’ ಎಂಬ ಗಾದೆಯಂತೆ ವಿವಾಹ ಮಾಡುವುದು ಬಡವರ ಪಾಲಿಗೆ ಕಷ್ಟಸಾಧ್ಯವಾದ ಸಮಾರಂಭ. ಅದರಲ್ಲೂ ಇಂದಿನ ಬೆಲೆ ಏರಿಕೆಯ ದಿನಮಾನದಲ್ಲಿ ಹೆಣ್ಣು ಹೊತ್ತವರು ಸಾಲದ ಸುಳಿಯಲ್ಲೇ ಸಿಲುಕಿದಂತೆ. ಇಂತಹ ಬಡವರ ಸ್ಥಿತಿಯನ್ನು ಮನಗಂಡ ಸ್ಥಳೀಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಬಸವರಾಜ ಈರಪ್ಪ ಚಲ್ಮಿ (57) ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

  ಶಿಕ್ಷಕ ಬಿ.ಐ. ಚಲ್ಮಿಯವರು ತಮಗೆ ಬರುವ ಆದಾಯದಲ್ಲೇ ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂಬ ವಿಶಾಲ ಮನೋಭಾವದವರು. ಅದೆಷ್ಟೋ ಬಡ ಮಕ್ಕಳ ಕಲಿಕೆಗೂ ನೆರವಾದ ಉದಾಹರಣೆಗಳಿವೆ. 2022ರ ಏಪ್ರಿಲ್ 29ರಂದು ಹುಟ್ಟೂರು ನಿಡಗುಂದಿ ತಾಲೂಕಿನ ವಂದಾಲ ಗ್ರಾಮದಲ್ಲಿ ಎರಡು ಜತೆ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದರು.

  ಈ ವರ್ಷ ನಿಡಗುಂದಿಯ 10 ಜೋಡಿ ಬಡವರ ಸಾಮೂಹಿಕ ವಿವಾಹ ಮಾಡಲು ಸಂಕಲ್ಪಮಾಡಿದ್ದು, ಪ್ರಸ್ತುತ ಗೊಳಸಂಗಿ ಗ್ರಾಮದ ಬಳಿ ಇರುವ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನ. 24ರಂದು, ಶುಕ್ರವಾರ ಮಧ್ಯಾಹ್ನ 12-27ಕ್ಕೆ ಮೂರು ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದಾರೆ.

  ಕಲ್ಯಾಣ ಸಮಾರಂಭಕ್ಕೆ ಮುತ್ತಗಿ, ಅಬ್ಬಿಹಾಳ, ನಿಡಗುಂದಿ ಮತ್ತು ಮಧ್ಯಪ್ರದೇಶದ ಪಾಂಡುರನಾ ಸಂಸ್ಥಾನ ಹಿರೇಮಠದ ಪೀಠಾಧೀಶ ಶ್ರೀ ವೀರರುದ್ರಮುನಿ ಶಿವಾಚಾರ್ಯರು, ಯರನಾಳ ಸಂಸ್ಥಾನ ವಿರಕ್ತಮಠದ ಗುರು ಸಂಗನಬಸವ ಸ್ವಾಮೀಜಿ, ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಸ್ವಾಮೀಜಿ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು, ಗೊಳಸಂಗಿ ದೇವಾಂಗಮಠದ ಹುಚ್ಚಯ್ಯ ಸ್ವಾಮೀಜಿಗಳವರ ನೇತೃತ್ವ ಮತ್ತು ಸಮಸ್ತ ಗುರು-ಹಿರಿಯರು ಸಾಕ್ಷಿಯಾಗಲಿದ್ದು, ನವ ವಧು-ವರರಿಗೆ ಶುಭ ಹಾರೈಸುವರು. ಶಿಕ್ಷಕ ಚಲ್ಮಿ ಅವರ ನಿಸ್ವಾರ್ಥ ಸೇವೆಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಗ್ರಾಮಸ್ಥರೂ ಕೈಜೋಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts