ಕುರುಕ್ಷೇತ್ರದ ಅವಧಿ 3 ಗಂಟೆ!

ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರತಂಡ ಈವರೆಗೂ ಸಣ್ಣ ಸುಳಿವೂ ನೀಡಿರಲಿಲ್ಲ. ಇದೀಗ ಚಿತ್ರ ಬಿಡುಗಡೆಗೆ ಹತ್ತಿರವಾಗುತ್ತಿರುವ ಮಾಹಿತಿ ಹೊರಬಿದ್ದಿದ್ದು, ಅಭಿಮಾನಿಗಳಿಗೆ 2019ರ ಜನವರಿಯಲ್ಲಿ ಸಿಹಿ ಸುದ್ದಿ ನೀಡಲಿದ್ದಾರೆ ದರ್ಶನ್. ಸದ್ದಿಲ್ಲದೆ, ಸೆನ್ಸಾರ್ ಮುಗಿಸಿಕೊಂಡಿರುವ ‘ಕುರುಕ್ಷೇತ್ರ’ಕ್ಕೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಈ ಮೂಲಕ ಶೀಘ್ರದಲ್ಲೇ ಪ್ರೇಕ್ಷಕರೆದುರು ಆಗಮಿಸುವ ಉತ್ಸಾಹದಲ್ಲಿದೆ ‘ಕುರುಕ್ಷೇತ್ರ’ ತಂಡ.

ಒಂದೂವರೆ ವರ್ಷದ ಹಿಂದೆಯೇ ಸೆಟ್ಟೇರಿದ್ದ ‘ಕುರುಕ್ಷೇತ್ರ’ ಚಿತ್ರ 2ಡಿ ಮತ್ತು 3ಡಿ ರೂಪದಲ್ಲಿ ತೆರೆಮೇಲೆ ಬರುತ್ತಿದೆ. ಆ ಕಾರಣಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಾಗಿ ಚಿತ್ರತಂಡ ಸುದೀರ್ಘ ಸಮಯವನ್ನು ಮೀಸಲಿಟ್ಟಿತ್ತು. ಇದೀಗ 2ಡಿ ಅವತರಣಿಕೆಗೆ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೆಟ್ ಸಿಕ್ಕಿದೆ. ವಿಶೇಷ ಏನೆಂದರೆ, ಪೌರಾಣಿಕ ಕಥಾಹಂದರವುಳ್ಳ ‘ಕುರುಕ್ಷೇತ್ರ’ ಸಿನಿಮಾ ಬರೋಬ್ಬರಿ 3 ಗಂಟೆ 5 ನಿಮಿಷ ಅವಧಿ ಹೊಂದಿದೆ. ನಿರ್ದೇಶಕ ನಾಗಣ್ಣ, ಗೀತ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಸೇರಿ ಒಟ್ಟು ನಾಲ್ವರು ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಹಾಡುಗಳಿಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದು, ದೊಡ್ಡ ತಾರಾಗಣ ಕೂಡ ಈ ಚಿತ್ರದ ಹೈಲೈಟ್. ದರ್ಶನ್, ಅಂಬರೀಷ್, ರವಿಚಂದ್ರನ್, ಶಶಿಕುಮಾರ್, ಸೋನುಸೂದ್, ಅರ್ಜುನ್ ಸರ್ಜಾ, ಸ್ನೇಹಾ, ಹರಿಪ್ರಿಯಾ ಸೇರಿ ಹತ್ತಾರು ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಶಾಸಕ ಮುನಿರತ್ನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.