ಬೈಂದೂರು ಅಭಿವೃದ್ಧಿಗೆ ಬೇಕು ಇಚ್ಛಾಶಕ್ತಿ

ಬಿ. ನರಸಿಂಹ ನಾಯಕ್ ಬೈಂದೂರು

ನೂತನ ತಾಲೂಕು ಕೇಂದ್ರ ಬೈಂದೂರು ಹಲವಾರು ಸವಾಲುಗಳುನ್ನು ಎದುರಿಸುತ್ತಿದೆ. ಈಗಷ್ಟೆ ಅಭಿವೃದ್ಧಿ ಕಡೆಗೆ ಹೆಜ್ಜೆ ಇಡುತ್ತಿದ್ದು, ಮಾದರಿಯಾಗಿ ರೂಪಿಸಬೇಕಾದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಅಭಿವೃದ್ದಿ ಪರ ಚಿಂತಕರು ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.

ಬೈಂದೂರು ತಾಲೂಕು 2018ರ ಜ.27ರಿಂದ ಅಧಿಕೃತವಾಗಿ ಕಾರ್ಯಾರಂಭಗೊಂಡಿದೆ. ವರ್ಷ ಕಳೆದರೂ ತಾಲೂಕಿಗೆ ಸಂಬಂಧಪಟ್ಟ ಪ್ರಮುಖ ಕಚೇರಿಗಳು ಹಾಗೂ ನ್ಯಾಯಾಲಯ ಕಚೇರಿಗಳು ಇನ್ನೂ ಸ್ಥಾಪನೆಯಾಗಿಲ್ಲ. ಯಾವುದೇ ಗಂಭೀರ ಪ್ರಕರಣ ಸಂದರ್ಭ ಕುಂದಾಪುರ, ಉಡುಪಿ ಹಾಗೂ ಮಣಿಪಾಲಗಳಂತಹ ದೊಡ್ಡ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿ ಇನ್ನೂ ಇದೆ. ಆದ್ದರಿಂದ ಸುಸಜ್ಜಿತ ತಾಲೂಕು ಆಸ್ಪತ್ರೆ ಸ್ಥಾಪನೆಯಾಗಬೇಕು.

ಶಿಕ್ಷಣ, ಆರೋಗ್ಯ, ಉದ್ದಿಮೆ, ಕೃಷಿ, ಸಾರಿಗೆ, ಪ್ರವಾಸೋದ್ಯಮ ಎಲ್ಲ ವಿಭಾಗಗಳಲ್ಲೂ ತಾಲೂಕಿನ ಅಗತ್ಯ ಅವಕಾಶಗಳ ಸಮರ್ಪಕತೆ ಕಾಣಬೇಕೆಂಬುದು ತಾಲೂಕಿನ ಜನತೆಯ ಆಶಯ. ಶಿಕ್ಷಣ ಕ್ಷೇತ್ರದಲ್ಲಿ ಪದವಿ ಕಾಲೇಜು ಶೀಘ್ರ ಅಭಿವೃದ್ಧಿಯಾಗಬೇಕಿದೆ. ಡಿಪ್ಲೊಮಾ, ಸ್ನಾತಕೋತ್ತರ, ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಯಾಗಬೇಕಿದೆ. ರಸ್ತೆ ನಿರ್ಮಾಣ, ಒಳಚರಂಡಿ, ಕುಡಿಯುವ ನೀರು ಪೂರೈಕೆ ಸಮರ್ಪಕವಾಗಬೇಕಿದೆ.

ಸಾರಿಗೆ ವ್ಯವಸ್ಥೆ ಎಲ್ಲ ಬಸ್‌ಗಳು ನಿಲ್ದಾಣಕ್ಕೆ ಹೋಗದೆ ಬೈಂದೂರು ಜಂಕ್ಷನ್‌ನಲ್ಲಿ ನಿಲ್ಲುವುದರಿಂದ ನಿತ್ಯ ಜನದಟ್ಟಣೆಯಾಗುತ್ತಿದೆ. ಒಂದೆಡೆ ರಾಷ್ಟ್ರೀಯ ಹೆದ್ದಾರಿ, ಇನ್ನೊಂದೆಡೆ ಪದವಿ ಕಾಲೇಜು ವಿದ್ಯಾರ್ಥಿಗಳು ಜತೆಗೆ ರಿಕ್ಷಾ, ಟೆಂಪೋ ನಿಲ್ದಾಣದಿಂದ ಬೈಂದೂರಿನ ಹೃದಯ ಭಾಗ ಗಿಜಿಗುಡುತ್ತಿದೆೆ. ಬೈಂದೂರು ರಥಬೀದಿಯ ಎರಡು ಇಕ್ಕೆಲಗಳಲ್ಲಿ ಸ್ಥಳೀಯ ವ್ಯಾಪಾರಸ್ಥರು ಇನ್ನೊಂದೆಡೆ ಸಾಲು ಕಟ್ಟಿ ನಿಂತ ವಾಹನ ಇದರಿಂದ ರಥಬೀದಿ ಸಂಚಾರ ದುಸ್ತರವಾಗಿದೆ. ದೊಂಬೆ -ಕರಾವಳಿ, ತಹಸೀಲ್ದಾರ್ ಕಚೇರಿ, ಯಡ್ತರೆ ಪಂಚಾಯಿತಿಗಳಿಗೆ ಇದೇ ಮಾರ್ಗ ಅವಲಂಬಿಸಬೇಕಾಗಿದೆ. ಹೀಗಾಗಿ ಮೊದಲು ಸಂಚಾರ ವ್ಯವಸ್ಥೆ ಸುಗಮವಾಗಬೇಕು.

ಬೈಂದೂರು ತಾಲೂಕಿನ ಎಲ್ಲ ಕಚೇರಿಗಳು ತಾಲೂಕು ಕೇಂದ್ರದಲ್ಲಿ ಕಾರ್ಯಾರಂಭಗೊಂಡು ಬೇಡಿಕೆಗೆ ಈಡೇರುವಲ್ಲಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಬೈಂದೂರು, ಪಡುವರಿ ಮತ್ತು ಯಡ್ತರೆ ಗ್ರಾಮ ಪಂಚಾಯಿತಿ ಪುನಃ ಸೇರಿಸಿ ಬೈಂದೂರು ಪುರಸಭೆ ರಚನೆ ಆಗಬೇಕಾಗಿದೆ. ಈಗಿರುವ ತಾಲೂಕು ಕಚೇರಿ ಎದುರು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಾಗ ಕಾದಿರಿಸಿದ್ದು, ಕೂಡಲೇ ಮಂಜೂರಾತಿ ಮಾಡಬೇಕಾಗಿದೆ. 26 ಗ್ರಾಮ ಪಂಚಾಯಿತಿಗಳಿಂದ ಹೊಸ ತಾಲೂಕಿನ ಧಾರಣ ಶಕ್ತಿ ಮತ್ತು ದೃಢತೆಗೆ ಅನುಕೂಲವಾಗಿಲ್ಲ ಎಂಬ ಕೊರಗಿದೆ.
ಬಿ. ಜಗನ್ನಾಥ ಶೆಟ್ಟಿ, ಅಧ್ಯಕ್ಷರು ತಾಲೂಕು ರಚನಾ ಹೋರಾಟ ಸಮಿತಿ.