More

    ಕೈ ನಾಯಕನ ಮೇಲೆ ನೂರಾರು ನಿರೀಕ್ಷೆ

    ಜಿ.ಕೆ.ಸುಗ್ಗರಾಜು ನೆಲಮಂಗಲ
    ಹತ್ತು ವರ್ಷದ ಜೆಡಿಎಸ್ ಭದ್ರಕೋಟೆ ಭೇದಿಸಿ ನೂತನ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಎನ್.ಶ್ರೀನಿವಾಸ್ ಅವರಿಗೆ ತಾಲೂಕಿನಲ್ಲಿನ ಕೆಲವು ಜ್ವಲಂತ ಸಮಸ್ಯೆಗಳು ಸವಾಲಾಗಲಿದ್ದು, ಅವುಗಳನ್ನು ಹೇಗೆ ಎದುರಿಸಲಿದ್ದಾರೆ, ಜನರ ಆಶೋತ್ತರಗಳಿಗೆ ಹೇಗೆ ಸ್ಪಂದಿಸಲಿದ್ದಾರೆ ಎಂಬ ಕುತೂಹಲದಲ್ಲಿ ಕ್ಷೇತ್ರದ ಜನತೆ ಎದುರು ನೋಡುತ್ತಿದ್ದಾರೆ.
    ಕೆಲ ಹಿಂದುಳಿದ ಗ್ರಾಮದಲ್ಲಿ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ, ಚರಂಡಿ, ರಸ್ತೆ, ಜನರಿಗೆ ಹಕ್ಕು ಪತ್ರ, ಅಕ್ರಮ ಮದ್ಯ ಮಾರಾಟ, ಸರ್ಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರ, ಘನತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ, ಮಾರುಕಟ್ಟೆಯ ಸೌಲಭ್ಯ, ಕೆರೆ ಅಭಿವೃದ್ಧಿ ಸೇರಿ ಸಾಕಷ್ಟು ಸಮಸ್ಯೆಗೆ ಪರಿಹಾರ ಕಲ್ಪಿಸುವ ಜವಾಬ್ದಾರಿ ಶಾಸಕರ ಮೇಲಿದೆ.
    ಕೆರೆ ಅಭಿವೃದ್ಧಿಯೊಂದಿಗೆ ಮೂಲಸೌಕರ್ಯಕ್ಕೆ ಒತ್ತು: ನಗರದ ಅಡೇಪೇಟೆಯ ಕೆರೆ ಹಾಗೂ ನಗರಸಭೆ ವ್ಯಾಪ್ತಿಯ ಬಿನ್ನಮಂಗಲ ಕೆರೆ ಅಭಿವೃದ್ಧಿಯಾಗಬೇಕಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಿದ್ದರೂ ಹಳೇ ಪುರಸಭೆ ಕಟ್ಟಡದಲ್ಲಿ ನಗರಸಭೆ ಕರ್ತವ್ಯ ನಿರ್ವಹಿಸುತ್ತಿದೆ. ಸುಸಜ್ಜಿತ ನಗರಸಭೆ ಕಟ್ಟಡ ಬೇಕಿದೆ. 31 ವಾರ್ಡ್‌ಗಳಲ್ಲಿ ಯುಜಿಡಿ ವ್ಯವಸ್ಥೆ ಆಗಬೇಕಿದೆ. ಕೂಡಲೇ ಬಸ್ ನಿಲ್ದಾಣ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ. ನಗರದಲ್ಲಿ ನಿತ್ಯ ರಸ್ತೆ ಬದಿಯಲ್ಲಿ ನೂರಾರು ಮಂದಿ ವ್ಯಾಪಾರ ಮಾಡುತ್ತಿದ್ದು, ವಾಹನದಟ್ಟಣೆ ಕಿರಿಕಿರಿ ಎದುರಾಗಿದ್ದು, ಸುಸಜ್ಜಿತ ಮಾರುಕಟ್ಟೆ ಅವಶ್ಯಕತೆ ಇದೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆ ಕಾಡುತ್ತಿವೆ, ಐಸಿಯು ವಾರ್ಡ್, ಶಸ್ತ್ರಚಿಕಿತ್ಸಾ ಕೇಂದ್ರ, ಸುಸಜ್ಜಿತ ಬ್ಲಡ್ ಬ್ಯಾಂಕ್ ಸೌಲಭ್ಯ ಕಲ್ಪಿಸಬೇಕಿದೆ. ಮೈಲನಹಳ್ಳಿಯ ಸರ್ಕಾರಿ ಜಮೀನಿನಲ್ಲಿ 100 ಬೆಡ್ ಸೌಲಭ್ಯಗಳ ಆಸ್ಪತ್ರೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಅನುಮೋದನೆ ನೀಡಿದ್ದು, ನೂತನ ಶಾಸಕರು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಆಸ್ಪತ್ರೆ ನಿರ್ಮಾಣ ಮಾಡಬೇಕಿದೆ.

    ಕ್ಷೇತ್ರದ ಜನರ ಬೇಡಿಕೆಗಳು: ನೆಲಮಂಗಲಕ್ಕೆ ಮೆಟ್ರೋ ಸೌಲಭ್ಯ, ಹೋಬಳಿ ಕೇಂದ್ರದಲ್ಲಿ ನಾಡಕಚೇರಿ ನಿರ್ಮಾಣ, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ, ಬಹುಮಹಡಿ ಕಟ್ಟಡ ಮಾದರಿಯಲ್ಲಿ ವಸತಿ ಹಂಚಿಕೆ, ಸಾರಿಗೆ ಸಂಪರ್ಕ, ಪಿಜಿ, ಪಾಲಿಟೆಕ್ನಿಕ್, ಇಂಜಿನಿಯರ್, ಕಾನೂನು ಕಾಲೇಜು, ಮೆಡಿಕಲ್ ಕಾಲೇಜು, ಐಟಿಐ ಕಾಲೇಜು, ಹೈಟೆಕ್ ಗ್ರಂಥಾಲಯ, ಕೋಚಿಂಗ್ ಸೆಂಟರ್, ಕೌಶಲ ತರಬೇತಿ ಕೇಂದ್ರ, ಕೃಷಿ ಮಾರುಕಟ್ಟೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಉದ್ಯಾನವನಗಳ ಅಭಿವೃದ್ಧಿ, ಕಸ ವಿಲೇವಾರಿ ನಿರ್ವಹಣೆ ಸೇರಿ ಹಲವು ಬೇಡಿಕೆಗಳಿದ್ದು ನೂತನ ಶಾಸಕರ ಮೇಲೆ ನೂರಾರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.



    ಸ್ಥಗಿತವಾದ ಕಾಮಗಾರಿಗೆ ಚುರುಕು ಸಿಗುವುದೇ? ರಾಜ್ಯ ರಾಜಧಾನಿಗೆ ಹೆಬ್ಬಾಗಿಲಾಗಿರುವ ನೆಲಮಂಗಲ ಕ್ಷೇತ್ರ ನಿರೀಕ್ಷೆಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. 2013ರಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಆಯ್ಕೆಯಾದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು, 2018 ಚುನಾವಣೆಯಲ್ಲಿ 2 ನೇ ಬಾರಿಗೆ ಆಯ್ಕೆಯಾದ ವೇಳೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತಾದರೂ ಮೈತ್ರಿ ಸರ್ಕಾರ ಉರುಳಿಬಿತ್ತು. ಈ ವೇಳೆಗೆ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿತು. ಚಾಲನೆ ನೀಡಿದ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನನೆಗುದಿಗೆ ಬಿದ್ದಿದ್ದ ಒಳಚರಂಡಿ ಯೋಜನೆಗೆ ಅನುದಾನ ಬಿಡುಗಡೆಗೆ ಹೋರಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ನಗರ ಸಭೆ ವ್ಯಾಪ್ತಿಯಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯಡಿ ಕೋಟ್ಯಂತರ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿ ಮಾಡಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಾದೇಶ ಪಡೆದುಕೊಂಡರೂ ಆರಂಭಗೊಳ್ಳದೆ ಇದ್ದ 14 ಕೋಟಿ ರೂ.ವೆಚ್ಚದ ನಗರೋತ್ಥಾನ ಯೋಜನೆಯ ವಿವಿಧ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಇದರ ನಡುವೆ ಪ್ರಸ್ತುತ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಕಾಂಗ್ರೆಸ್ ಶಾಸಕರೇ ಆಯ್ಕೆಯಾಗಿದ್ದಾರೆ. ಇಂಥ ಸನ್ನಿವೇಶದಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಹೇಗೆ ಪೂರ್ಣಗೊಳಿಸುತ್ತಾರೆ, ಅನುದಾನ ತರುವ ಪ್ರಮಾಣವೆಷ್ಟು ಎಂಬ ಚರ್ಚೆ ಶುರುವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts