ಮುಂಗಾರು ಮಳೆ ಬರುವ ಸೂಚನೆ ಇಲ್ಲ

ಚಳ್ಳಕೆರೆ: ಮುಂಗಾರು ಮಳೆ ಬರುವ ಸೂಚನೆ ಕಾಣುತ್ತಿಲ್ಲ. ತಾಲೂಕಿನ ಪ್ರತಿ ಗ್ರಾಮಕ್ಕೂ ಕುಡಿವ ನೀರು ಸೇರಿ ಅಗತ್ಯ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಾರುತಿ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಶಾಸಕರು, ರೈತರಿಗೆ ಶೇಂಗಾ ಬಿತ್ತನೆ ಬೀಜ ಕೊರತೆ ಆಗದಂತೆ ನಿಗಾ ವಹಿಸಬೇಕು. ವಿತರಣಾ ಕೇಂದ್ರಗಳಲ್ಲಿ ಗೊಂದಲಗಳಿಗೆ ಅವಕಾಶ ಕೊಡದೆ ಅರ್ಹರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಪ್ರತಿಕ್ರಿಯಿಸಿದ ಅಧಿಕಾರಿ, ತಾಲೂಕಿನಲ್ಲಿ 20 ಸಾವಿರ ಕ್ವಿಂಟಲ್ ಶೇಂಗಾ ವಿತರಿಸುವ ಗುರಿ ಇದೆ. ಈಗಾಗಲೇ 8 ಸಾವಿರ ಕ್ವಿಂಟಲ್ ವಿತರಣೆ ಮಾಡಲಾಗಿದೆ. ಪ್ರತಿ ರೈತರಿಗೂ ಶೇಂಗಾ ನೀಡಲು ಟೋಕನ್ ಕೊಡಲಾಗಿದೆ ಎಂದು ತಿಳಿಸಿದರು.

ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪೂರೈಕೆ ಮಾಡಬೇಕು. ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕಗಳನ್ನು ಕೂಡಲೇ ಸರಿಪಡಿಸಬೇಕು. ಪ್ರತಿ ದಿನದ ಟ್ಯಾಂಕರ್ ಮಾಲೀಕರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳುವಂತೆ ಪ್ರಭಾರ ಎಇಇ ತಿಪ್ಪೇಸ್ವಾಮಿಗೆ ಶಾಸಕರು ಸೂಚಿಸಿದರು.

ಮೀಸಲು ಕ್ಷೇತ್ರಗಳಾಗಿರುವ ಮೊಳಕಾಲ್ಮೂರು, ಚಳ್ಳಕೆರೆ, ಪಾವಗಡ ತಾಲೂಕುಗಳಲ್ಲಿ ಶೇ.55ಕ್ಕಿಂತ ಹೆಚ್ಚು ಎಸ್ಸಿ-ಎಸ್ಟಿ ಸಮುದಾಯ ಇರುವ ಕಾರಣ ತುಂಗಭದ್ರ ಹಿನ್ನೀರಿನ ಯೋಜನೆ ತ್ವರಿತವಾಗಿ ಜಾರಿಯಾಗಲು ಅನುಕೂಲವಾಗಿದೆ. ಇದರಿಂದ ತಾಲೂಕಿನ ಪ್ರತಿ ಗ್ರಾಮದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ತಿಳಿಸಿದರು.

ಪಶು ಇಲಾಖೆ ಡಾ.ಹನುಮಪ್ಪ ಮಾತನಾಡುವಾಗ ಮಧ್ಯೆ ಪ್ರವೇಶಿಸಿದ ಶಾಸಕರು, ಗೋಶಾಲೆಗಳಲ್ಲಿ ನೆರಳಿನ ವ್ಯವಸ್ಥೆ ಇಲ್ಲ. ರೈತರು ಮರದ ನೆರಳಿಗೆ ದನಗಳನ್ನು ಕಟ್ಟಿ ಮೇಯಿಸುತ್ತಿದ್ದರಿಂದ ಅಧಿಕ ಮೇವು ದುರುಪಯೋಗವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಿ ಎಂದು ಸೂಚಿಸಿದರು.

ಸಿಡಿಪಿಒ ಸಿ.ಕೆ.ಗಿರಿಜಾಂಬಾ ಮಾತನಾಡಿ, ತಾಲೂಕಿನ 40 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ನಗರದಲ್ಲಿ 11, ಗ್ರಾಮೀಣ ಭಾಗದಲ್ಲಿ 21 ಕೇಂದ್ರಗಳಿಗೆ ನಿವೇಶನದ ಕೊರತೆ ಇದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಶಾಸಕರು, ಶಾಲಾ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ, ಕೃಷಿ ಚಟುವಟಿಕೆಗೆ ಸಂಬಂಧಿಸಿದ ಯೋಜನೆಗಳ ಲಾಭ ರೈತರಿಗೆ ಸಿಗುವಂತಾಗಬೇಕು. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸೌಲಭ್ಯ ಅರ್ಹರಿಗೆ ದೊರಕಿಸಿಕೊಡಬೇಕು ಎಂದು ಗ್ರಾಮ ಲೆಕ್ಕಿಗರಿಗೆ ತಿಳಿಸಿದರು.

ಅಧ್ಯಕ್ಷೆ ಕವಿತಾ ರಾಮಣ್ಣ, ತಾಪಂ ಸಾಮಾಜಿಕ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ಇಒ ಬಿ.ಎಲ್.ಈಶ್ವರಪ್ರಸಾದ್, ಬಿಇಒ ಸಿ.ಎಸ್.ವೆಂಕಟೇಶ್, ಬೆಸ್ಕಾಂ ಎಇಇ ಶಿವಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಮಂಜಪ್ಪ, ತೋಟಗಾರಿಕಾ ಇಲಾಖೆ ಅಧಿಕಾರಿ ವಿರೂಪಾಕ್ಷಪ್ಪ ಇತರರಿದ್ದರು.