ಚಳ್ಳಕೆರೆ: ರಾಜನಹಳ್ಳಿ ಗುರುಪೀಠದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಗೆ ಪ್ರತಿ ಹಳ್ಳಿಗಳಿಂದ ಜನರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಇಲ್ಲಿನ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಾಲ್ಮೀಕಿ ಸಮುದಾಯದ ಮುಖಂಡರೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟಿನ ಅಗತ್ಯವಿದೆ. ಸರ್ಕಾರದಿಂದ ಪ್ರತಿ ವರ್ಷ ಸಮುದಾಯಕ್ಕೆ ಬಿಡುಗಡೆ ಮಾಡುತ್ತಿರುವ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆ ಆಗುತ್ತಿಲ್ಲ. ಉಳಿದುಕೊಳ್ಳುವ ಅನುದಾನ ಮರು ಬಳಕೆ ಮಾಡದೆ ಹಿಂಪಡೆಯುವ ಪದ್ಧತಿ ಇದೆ. ಆದ್ದರಿಂದ ಪ್ರತ್ಯೇಕ ನಿರ್ವಹಣೆಗೆ ನಿಗಮ ಸ್ಥಾಪಿಸುವುದು ಅಗತ್ಯವಿದೆ ಎಂದು ಹೇಳಿದರು.
ಸಮುದಾಯದ ಹಿತ ಕಾಪಾಡಲು ರಾಜಕೀಯ ನಾಯಕರು ಮುಂದಾಗಬೇಕು. ಪ್ರಗತಿ ವಿಚಾರದಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ತೋರದೆ ಒಗ್ಗಟ್ಟು ಪ್ರದರ್ಶನವಾಗಬೇಕು ಎಂದರು.
ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಲಾಗಿದೆ. ನಾಗಮೋಹನ್ ದಾಸ್ ಸಮಿತಿ ನಿರ್ವಹಿಸುತ್ತಿರುವ ಪ್ರಸ್ತಾವನೆಗಳಿಗೆ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಸಮಿತಿ ನಿರ್ಣಯದಂತೆ ಮತ್ತು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸೌಲಭ್ಯದಂತೆ ರಾಜ್ಯದಲ್ಲಿ ಕೂಡ ಮೀಸಲಾತಿ ಜಾರಿ ಮಾಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ರಾಜನಹಳ್ಳಿ ಗುರುಪೀಠದಲ್ಲಿ ನಡೆಯುವ ಜಾತ್ರ ಮಹೋತ್ಸವಕ್ಕೆ ಕ್ಷೇತ್ರದಿಂದ ಕೈಗೊಳ್ಳುವ ಸಂಘಟಿತ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ಮಾಡಲಾಗುವುದು ಎಂದರು.
ನಗರಸಭೆ ಸದಸ್ಯರಾದ ಸಿ.ಶ್ರೀನಿವಾಸ್, ಬಿ.ಟಿ.ರಮೇಶ್‌ಗೌಡ, ವೆಂಕಟೇಶ್, ತಾಪಂ ಸದಸ್ಯರಾದ ಸಣ್ಣಸೂರಯ್ಯ, ಜಿ.ವೀರೇಶ್, ರಂಜಿತಾ, ಮುಖಂಡರಾದ ಮಲ್ಲಪ್ಪನಾಯಕ, ಹರ್ತಿಕೋಟೆ ವೀರೇಂದ್ರ ಸಿಂಹ, ಬಾಳೆಕಾಯಿ ರಾಮದಾಸ್, ಸಾಹಿತಿ ತಿಪ್ಪಣ್ಣ ಮರಿಕುಂಟೆ, ಬಂಗೆಪ್ಪ ಮಾಸ್ಟರ್, ದುರ್ಗಾವರ ತಿಪ್ಪೇಸ್ವಾಮಿ, ಸೊಂಡೇಕೆರೆ ಶಿವಣ್ಣ, ಮಹಿಳಾ ಘಟಕದ ಸೌಭಾಗ್ಯ ತಿಪ್ಪೇಸ್ವಾಮಿ, ಜಯಲಕ್ಷ್ಮೀ ಇದ್ದರು.
ದೇಣಿಗೆ ಸಂಗ್ರಹ: ವಾಲ್ಮೀಕಿ ಜಾತ್ರೆಯ ದೇಣಿಗೆ ಸಂಗ್ರಹಕ್ಕೆ ಎಲ್‌ಐಸಿ ತಿಪ್ಪೇಸ್ವಾಮಿ, ಸೂರ್ಯಪ್ರಭ, ಪಿ.ತಿಪ್ಪೇಸ್ವಾಮಿ ಅವರನ್ನು ನೇಮಿಸಲಾಯಿತು. ವಾಲ್ಮೀಕಿ ಕಲ್ಯಾಣ ಮಂಟಪ ಸಮಿತಿಯವರು 50 ಸಾವಿರ, ಕುಬೇರ ಗ್ಯಾಸ್ ಏಜೆನ್ಸಿ ಮಾಲೀಕ ನಗರಂಗೆರೆ ತಿಪ್ಪೇರುದ್ರಪ್ಪ 25 ಸಾವಿರ, ನಾಯಕ ವಿದ್ಯಾರ್ಥಿ ನಿಲಯ ಸಮಿತಿಯಿಂದ 50 ಸಾವಿರ ದೇಣಿಗೆ ನೀಡಲಾಯಿತು.
ರಾಮ ಮಂದಿರ ಪಕ್ಕ ವಾಲ್ಮೀಕಿ ದೇಗಲು ನಿರ್ಮಿಸಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಸಮೀಪ ವಾಲ್ಮೀಕಿ ಮಂದಿರ ನಿರ್ಮಾಣ ಮಾಡಬೇಕು ಎಂದು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಎಂದು ಆಗ್ರಹಿಸಿದರು. ಹಂಪಿ ವಿಶ್ವ ವಿದ್ಯಾಲಯಕ್ಕೆ ವಾಲ್ಮೀಕಿ ಹೆಸರಿಡಬೇಕು. ಜನಸಂಖ್ಯೆಗೆ ಅನುಗುಣವಾಗಿ 7.5 ಮೀಸಲಾತಿ ಜಾರಿಯಾಗಬೇಕು. ಸಮುದಾಯದ ಅಭಿವೃದ್ಧಿಗೆ ಬಿಡುಗಡೆ ಆಗುವ ಅನುದಾನ ನಿರ್ವಹಣೆಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.