ಚಳ್ಳಕೆರೆ: ತಾಲೂಕಿನ ವೇದಾವತಿ ನದಿಗೆ ವಿವಿ ಸಾಗರದಿಂದ 0.25 ಟಿಎಂಸಿ ಅಡಿ ನೀರನ್ನು ಹರಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಶಾಸಕರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2015ರಲ್ಲೇ ತಾಲೂಕಿನ ಕುಡಿಯುವ ನೀರಿನ ಅನುಕೂಲಕ್ಕಾಗಿ 0.25 ಟಿಎಂಸಿ ಅಡಿ ನೀರಿಗಾಗಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಕಳೆದ ಸದನ ಸಮಿತಿಯಲ್ಲೂ ಪ್ರಸ್ತುತ ಸ್ಥಿತಿ ಕುರಿತು ಸರ್ಕಾರದ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ಜಾರಕಿಹೊಳಿ ನೀರು ಬಿಡಲು ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ವಿವಿ ಸಾಗರದಲ್ಲಿ ಹೆಚ್ಚಿನ ನೀರು ಸಂಗ್ರಹ ಆಗಿರುವುದರಿಂದ ವೇದಾವತಿ ನದಿಗೆ ನೀರು ಬಿಡಲು ಈಗ ಯಾವುದೇ ಸಮಸ್ಯೆ ಇಲ್ಲ. ಇನ್ನೇನು ಎಂಟು ದಿನಗಳ ಒಳಗೆ ನೀರು ಹರಿಯಲಿದೆ.
ವಿವಿ ಸಾಗರದಿಂದ 36 ಕಿಮೀ ನದಿಯ ಮೂಲಕ ವೇದಾವತಿ ನದಿಗೆ ನೀರು ಹರಿಸುವಂತೆ ಸರ್ಕಾರ ಆದೇಶ ನೀಡಲಾಗಿದೆ. ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ನದಿಗೆ ನೀರು ಬರುವುದರಿಂದ ನದಿ ಭಾಗದ ಎರಡೂ ಕಡೆಯ ಹಳ್ಳಿಗಳಿಗೆ ಸಮಸ್ಯೆ ಬಗೆಹರಿಯಲಿದೆ ಮತ್ತು ಅಂತರ್ಜಲ ಅಭಿವೃದ್ಧಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮುಖಂಡ ಟಿ.ಪ್ರಭುದೇವ್, ಆರ್.ಪ್ರಸನ್ನಕುಮಾರ್, ಬೋರಯ್ಯ ಮತ್ತಿತರರು ಇದ್ದರು.