ಚಳ್ಳಕೆರೆ ಕೊಳೆಗೇರಿ ನಿವಾಸಿಗಳಿಗೆ ಮನೆ ಭಾಗ್ಯ

ಚಳ್ಳಕೆರೆ: ಕೊಳಗೇರಿ ನಿವಾಸಿಗಳಿಗೆ ನಿರ್ಮಾಣವಾಗುತ್ತಿರುವ ಮನೆಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಅಂಬೇಡ್ಕರ್ ಕಾಲನಿಯಲ್ಲಿ ಸೋಮವಾರ 1127 ಕೊಳೆಗೇರಿ ನಿವಾಸಿಗಳಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಜನತಾ ಕಾಲನಿ, ಅಂಬೇಡ್ಕರ್ ನಗರ ಸೇರಿ ಸ್ಲಂ ಕಾಲನಿಯಲ್ಲಿ ಕೆಲ ಬಡಕುಟುಂಬಗಳು ವಸತಿ ಸೌಲಭ್ಯವಿಲ್ಲದೆ ಗುಡಿಸಲ್ಲಿ ಜೀವನ ನಡೆಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸುವ ಮೂಲಕ 7 ಕೊಳಗೇರಿಗಳಲ್ಲಿ 3 ಕೊಳೆಗೇರಿ ನಿವಾಸಿಗಳನ್ನು ವಸತಿ ಸೌಕರ್ಯಕ್ಕೆ ಆಯ್ಕೆ ಮಾಡಲಾಗಿದೆ. ಸರ್ವರಿಗೂ ಸೂರು ಯೋಜನೆಯಡಿ ತಲಾ 5 ಲಕ್ಷ ರೂ. ವೆಚ್ಚದಂತೆ 1127 ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಖಾಸಗಿ ಬಸ್ ಸ್ಟ್ಯಾಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪಾವಗಡ ರಸ್ತೆಯ ಕೆಎಚ್‌ಬಿ ಕಾಲನಿಯ 5750 ಮನೆಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.