ಆಧಾರ್ ಕಾರ್ಡ್‌ಗೆ ಸಾಲು ಸಾಲು

ಚಳ್ಳಕೆರೆ: ಪಡಿತರ ಚೀಟಿ ಸೇರಿ ಎಲ್ಲದಕ್ಕೂ ಕಡ್ಡಾಯ ಆಧಾರ್ ಕಾರ್ಡ್. ಸರ್ಕಾರದ ಈ ಆದೇಶದಿಂದ ಬೆಚ್ಚುಬಿದ್ದಿರುವ ಜನತೆ ತಾಲೂಕು ಕಚೇರಿ, ಬ್ಯಾಂಕ್ ಸೇರಿ ಆಧಾರ್ ಕಾರ್ಡ್ ಕೇಂದ್ರ ಎದುರು ಜಮಾಯಿಸಿರುವ ಜನ ಹೈರಾಣು ಆಗಿದ್ದಾರೆ.

ನಾಲ್ಕು ದಿನಗಳಿಂದ ಕೇಂದ್ರಗಳ ಬಳಿ ಹಗಲು-ರಾತ್ರಿ ಎನ್ನದೇ ಆಧಾರ್ ಕಾರ್ಡ್ ಪಡೆಯಲು ಸಾಲುಗಟ್ಟಿದ್ದಾರೆ. ಆದರೆ, ನೋಂದಣಿ ಕಾರ್ಯ ಮಾತ್ರ ವಿಳಂಬ.

ವಿಷಯ ತಿಳಿದು ಎಸ್‌ಬಿಐ ಬ್ಯಾಂಕ್ ಬಳಿ ಜಮಾಯಿಸಿದ ಕರವೇ ಕಾರ್ಯಕರ್ತರು ಶನಿವಾರ ಧರಣಿ ನಡೆಸಿದರು.

ಪಡಿತರ ಕಾರ್ಡ್ ನವೀಕರಣಕ್ಕಾಗಿ ಕುಟುಂಬದ ಸದಸ್ಯರೆಲ್ಲರೂ ಆಧಾರ ಸಂಖ್ಯೆ ಹಾಗೂ ಬೆರಳಿನ ಗುರುತು ನೀಡಬೇಕಾದುದು ಕಡ್ಡಾಯ. ಕಂಪ್ಯೂಟರ್ ತಂತ್ರಾಂಶದಲ್ಲಿ ಮಕ್ಕಳ ಹಾಗೂ ವಯೋವೃದ್ಧರ ಬೆರಳಚ್ಚು ಮೂಡದೆ ಹಲವು ಸಮಸ್ಯೆ ಸೃಷ್ಟಿಸಿದೆ. ಅಲ್ಲದೇ ಸರ್ವರ್ ಸಮಸ್ಯೆಯಿಂದ ನೋಂದಣಿ, ನವೀಕರಣಕ್ಕೆ ವಿಳಂಬವಾಗುತ್ತಿದೆ.

ಗ್ರಾಮಸ್ಥರು ಪಡಿತರ ಕಾರ್ಡ್ ರದ್ದಾಗುವ ಆತಂಕದಲ್ಲಿ, ಆಧಾರ ನೋಂದಣಿ ವ್ಯವಸ್ಥೆ ಹೊಂದಿದ ಬ್ಯಾಂಕ್, ಕಚೇರಿಗಳಿಗೆ ಅಲೆಡಾಡುತ್ತಿದ್ದಾರೆ. ಹಗಲು ರಾತ್ರಿಯೆನ್ನದೆ ಸರತಿಯಲ್ಲಿ ನಿಂತು ಕಾಯುತ್ತಿದ್ದಾರೆ. ದಿನಕ್ಕೆ 15-20 ಜನರ ನೋಂದಣಿ ಮಾತ್ರ ಸಾಧ್ಯವಾಗುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.

ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಅಗತ್ಯಕ್ಕೆ ತಕ್ಕಷ್ಟು ನೋಂದಣಿ ಕಾರ್ಯ ಮಾಡಬೇಕು. ಜನರನ್ನು ಅಲೆದಾಡಿಸಬಾರದು ಎಂದು ಆಗ್ರಹಿಸಿದರು.

ವಿಷಯ ತಿಳಿದ ಶಾಸಕ ಟಿ.ರಘುಮೂತಿ, ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಈ ವೇಳೆ ಸಾಲುಗಟ್ಟಿ ನಿಂತಿದ್ದ ಜನತೆ ಹಾಗೂ ಕರವೇ ಮುಖಂಡರು, ಪಂಚಾಯಿತಿ ಮಟ್ಟದಲ್ಲಿ ಆಧಾರ್ ನೋಂದಣಿ ಕೇಂದ್ರ ತೆರೆಯಬೇಕು. ರೇಷನ್ ಕಾರ್ಡ್ ಉಳಿಸಿಕೊಳ್ಳಲು ಆಧಾರ್ ಜೋಡಣೆಗೆ ಅಂತಿಮ ದಿನದ ಗಡುವು ರದ್ದುಮಾಡಬೇಕು ಎಂದು ಮನವಿ ಮಾಡಿದರು.

ನೋಂದಣಿ ಕೇಂದ್ರ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು. ಅಗತ್ಯ ದಾಖಲೆಗಳ ಪಟ್ಟಿ ಪ್ರದರ್ಶಿಸಬೇಕು. ತ್ವರಿತ ಸೇವೆ ವ್ಯವಸ್ಥೆ ಕಲ್ಪಿಸಿ ಎಂದು ಬ್ಯಾಂಕ್ ವ್ಯವಸ್ಥಾಪಕ ರಮೇಶ್ ಅವರಿಗೆ ಸೂಚಿಸಿದ ಶಾಸಕರು, ತಾಲೂಕಿನಲ್ಲಿ ಎಲ್ಲಿಯೂ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಎಂ. ಮಲ್ಲಿಕಾರ್ಜುನಪ್ಪ ಅವರಿಗೆ ತಿಳಿಸಿದರು.

ಆಂದೋಲನದ ರೀತಿ ನೋಂದಣಿಗೆ ಪ್ರಚಾರ ನೀಡಿದ್ದೇವೆ. ಹೋಬಳಿ ಹಂತದಲ್ಲಿ ಆಧಾರ್ ನೋಂದಣಿಗೆ ಹೆಚ್ಚುವರಿ ಕೇಂದ್ರ ಸ್ಥಾಪಿಸಲಾಗುವುದು. ಜೋಡಣೆ ವಿಳಂಬವಾದರೂ ಪಡಿತರ ಕಾರ್ಡ್ ರದ್ದಾಗುವುದಿಲ್ಲ ಎಂದು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ ತಿಳಿಸಿದರು.

ಕರವೇ ಕಾರ್ಯಕರ್ತರಾದ ಎಂ.ಚೇತನ್‌ಕುಮಾರ್, ಆರ್.ಬ್ರಹ್ಮಾಚಾರ್, ನಗರಸಭಾ ಸದಸ್ಯ ಬಿ.ಟಿ.ರಮೇಶ್‌ಗೌಡ, ತಾಪಂ ಸದಸ್ಯ ವೀರೇಶ್, ಮುಖಂಡರಾದ ಆರ್.ಪ್ರಸನ್ನಕುಮಾರ್, ಅಂಜಿನಪ್ಪ ಇತರರಿದ್ದರು.

Leave a Reply

Your email address will not be published. Required fields are marked *