More

    ಮಕ್ಕಳ ಸಾಧನೆಗೆ ಶಿಕ್ಷಣವೇ ಬುನಾದಿ

    ಚಳ್ಳಕೆರೆ: ತಂದೆ, ತಾಯಿ ಆಸೆಯಂತೆ ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಿ ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂದು ಆರೋಗ್ಯ ಅಧಿಕಾರಿ ಡಾ.ಎನ್.ಗೀತಾ ಹೇಳಿದರು.

    ನಗರದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾತೃಭೋಜನಾ ಮತ್ತು ಪಾಲಕರ ಕ್ರೀಡಾಕೂಟದಲ್ಲಿ ಮಾತನಾಡಿ, ತಾಯಂದಿರಲ್ಲಿ ಮಕ್ಕಳ ಭವಿಷ್ಯದ ಕನಸುಗಳಿರಬೇಕು. ಬಾಲ್ಯ ವಿವಾಹ, ಮೂಢನಂಬಿಕೆಗಳಿಂದ ದೂರ ಇರುವ ಮೂಲಕ ಹೆಣ್ಣು ಮಕ್ಕಳನ್ನು ಪ್ರಬುದ್ಧವಾಗಿ ಬೆಳೆಸಬೇಕು ಎಂದರು.

    ಹೆಣ್ಣು ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚು ಇರುತ್ತದೆ. ತವರು ಮತ್ತು ಗಂಡನ ಮನೆ ಸಂಬಂಧಗಳನ್ನು ಅರ್ಥೈಸಿಕೊಂಡು ಬದುಕು ರೂಪಿಸಿಕೊಳ್ಳುವ ಜಾಣ್ಮೆ ಇರಬೇಕು. ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದ್ದರೂ ಮಹಿಳೆಯರಲ್ಲಿ ಪೂರ್ಣ ಶಿಕ್ಷಣ ಪಡೆಯುವ ಅವಕಾಶಗಳು ಕಾಣುತ್ತಿಲ್ಲ ಎಂದು ಬೇಸರಿಸಿದರು.

    ಜಿಲ್ಲಾ ಉಪಯೋಜನಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಶಿಕ್ಷಕರ ಪ್ರಾಮಾಣಿಕ ಪ್ರಯತ್ನ ಕಾಣುತ್ತಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಮುಖ್ಯಶಿಕ್ಷಕಿ ಎಂ.ಎನ್.ಶಿವಲೀಲಾ ಮಾತನಾಡಿ, ಆಧುನಿಕ ಬದಲಾವಣೆಯಲ್ಲಿ ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ಹಿರಿಯರು ಮತ್ತು ಶಿಕ್ಷಕರ ಕುರಿತು ಮಕ್ಕಳಿಗೆ ಗೌರವ ಇರಬೇಕು ಎಂದು ಹೇಳಿದರು.

    ಬಿಆರ್‌ಸಿ ಮಂಜುನಾಥ, ಸಹಶಿಕ್ಷಕರಾದ ಶೀಧರ್, ಈ.ರಾಣಿ, ಎಚ್.ವಿಜಯಲಕ್ಷ್ಮಿ, ಕೆ.ಗಂಗಾಧರನಾಯ್ಕ, ಡಿ.ಕೆ.ಲೀಲಾವತಿ, ಓ.ನೇತ್ರಾವತಿ, ಎನ್.ಮಮತಾ, ಎಸ್.ಒ.ಪುಟ್ಟರಂಗಮ್ಮ, ಎನ್.ಲತಾಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts