ಸಕಲರಿಗೂ ಲೇಸು ಬಯಸುವುದೇ ಮಾನವ ಧರ್ಮ

ಚಳ್ಳಕೆರೆ: ಸಕಲ ಜೀವರಾಶಿಗೂ ಲೇಸು  ಬಯಸುವುದೇ ಮಾನವ ಧರ್ಮ ಎಂದು ವೀರಶೈವ ಲಿಂಗಾಯತ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ತಿಳಿಸಿದರು.
ತಾಲೂಕಿನ ವೀರಶೈವ ಲಿಂಗಾಯತ ಯುವ ವೇದಿಕೆ ಆಯೋಜಿಸಲಿರುವ ಪಕ್ಷಿ ಸಂಕುಲ ರಕ್ಷಿಸಿ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ತನ್ನಂತೆ ಇತರೆ ಜೀವ ಸಂಕುಲಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು 12ನೇ ಶತಮಾನದಲ್ಲಿ ಬಸವಣ್ಣ ಸಾರಿದ್ದರು. ದಯೆಯೇ ಧರ್ಮದ ಮೂಲ ಎಂಬ ಜಾಗೃತಿ ಮೂಡಿಸಿದ್ದರು ಎಂದು ತಿಳಿಸಿದರು.
ಬೇಸಿಗೆ ಆರಂಭಕ್ಕೂ ಮುನ್ನ ಬಿಸಿಲಿನ ತಾಪ ಹೆಚ್ಚಿದೆ. ಬಂಡೀಪುರ ಅರಣ್ಯ ಸೇರಿ ಹಲವು ಪ್ರದೇಶಗಳಲ್ಲಿ ಅಗ್ನಿ ಅವಗಡ ಸಂಭವಿಸಿದೆ. 12ಸಾವಿರಕ್ಕೂ ಹೆಚ್ಚು ಅರಣ್ಯ ಪ್ರದೇಶ ದುರಂತಕ್ಕೀಡಾಗಿದೆ. ಸಾವಿರಾರು ವನ್ಯಸಂಕುಲ ನಾಶವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮನೆ ಮೇಲೆ ಪಾತ್ರೆಗಳಲ್ಲಿ ನೀರು, ಕಾಳು ಇಡುವ ಮೂಲಕ ಪಕ್ಷಿ ಸಂಕುಲಕ್ಕೆ ನೆರವಾಗಬೇಕು. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷಿ ಸಂಕುಲ ರಕ್ಷಿಸಿ ಎಂಬ ಮಾನವೀಯ ಕಾರ್ಯ ಆರಂಭಿಸಲಾಗುವುದು ಎಂದರು.
ವೇದಿಕೆಯಿಂದ ಹಿಂದುಳಿದ ಪ್ರದೇಶಗಳ 77 ಸರ್ಕಾರಿ ಶಾಲೆಯ 5,800 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕುಡಿವ ನೀರಿನ ಸೌಲಭ್ಯಕ್ಕೆ ಸಹಕಾರ ನೀಡಿದೆ ಎಂದು ತಿಳಿಸಿದರು.
ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಯಲಗಟ್ಟೆ ವಿ. ಯೋಗೇಶ್, ಕಾರ್ಯದರ್ಶಿ ಪ್ರವೀಣ್, ಉಪನ್ಯಾಸಕ ಜಿ.ವಿ. ರಾಜಣ್ಣ, ಗ್ರಾಪಂ ಸದಸ್ಯ ಮರಿಕುಂಟೆ ತಿಪ್ಪೇಸ್ವಾಮಿ, ಕಲ್ಲೇಶ್, ರಘು ಇತರರಿದ್ದರು.

Leave a Reply

Your email address will not be published. Required fields are marked *