ತಾಲೂಕು ಕಚೇರಿ ಮುಂದೆ ಅರವಟ್ಟಿಗೆ ಸ್ಥಾಪನೆ

ಚಳ್ಳಕೆರೆ: ಬಿಸಿಲಿನ ಝಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಯಕ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಎದುರು ಅರವಟ್ಟಿಗೆ ತೆರೆಯಲಾಗಿದೆ.

ಅರವಟ್ಟಿಗೆಗೆ ಚಾಲನೆ ನೀಡಿದ ಸಂಘದ ಅಧ್ಯಕ್ಷ ಸೂರನಾಯಕ, ಎಂಟು ವರ್ಷಗಳಿಂದ ಬೇಸಿಗೆ ವೇಳೆ ಅರವಟ್ಟಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಮನಸ್ಸಿಗೆ ತೃಪ್ತಿ ನೀಡುವ ವಿಷಯ ಎಂದರು.

ಗ್ರಾಮೀಣ ಭಾಗದಿಂದ ಸರ್ಕಾರಿ ಕಚೇರಿಗೆ ನಿತ್ಯ ನೂರಾರು ಜನ ಬರುತ್ತಾರೆ. ಅವರಿಗೆ ಉಚಿತವಾಗಿ ಶುದ್ಧ ನೀರಿನ ವ್ಯವಸ್ಥೆ ಮಾಡಿದ್ದೇವೆ. ಇದರ ನಿರ್ವಹಣೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಪೌರಾಯುಕ್ತ ಜೆ.ಟಿ. ಹನುಮಂತರಾಜು ಮಾತನಾಡಿ, ಪ್ರಸ್ತುತ ಬಿಸಿಲನ ಝಳ ಹೆಚ್ಚಾಗಿದೆ. ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಆದ್ದರಿಂದ ನೀರನ್ನು ಮಿತವಾಗಿ ಬಳಸಬೇಕು ಎಂದು ತಿಳಿಸಿದರು.

ನಗರಕ್ಕೆ ಬರುವ ಸಾವಿರಾರು ವಿದ್ಯಾರ್ಥಿಗಳಿಗೂ ಇದು ಅನುಕೂಲವಾಗುತ್ತದೆ. ಸಂಘ-ಸಂಸ್ಥೆಗಳೂ ಇಂಥ ಸೇವೆ ಆರಂಭಿಸಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್ ತುಷಾರ್ ಬಿ. ಹೊಸೂರ್, ಬಿಇಒ ಸಿ.ಎಸ್. ವೆಂಕಟೇಶ್, ತಾಪಂ ಇಒ ಬಿ.ಎಲ್. ಈಶ್ವರಪ್ರಸಾದ್, ಸಿಪಿಐ ಎನ್. ತಿಮ್ಮಣ್ಣ, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಬಿ. ತಿಪ್ಪೇಸ್ವಾಮಿ, ಸಿ. ಗುರುಸ್ವಾಮಿ ಇತರರಿದ್ದರು.