ವಯೋವೃದ್ಧರ ಸೇವೆ ದೇವರ ಸೇವೆಗೆ ಸಮ

ಚಳ್ಳಕೆರೆ: ವಯೋವೃದ್ಧರ ಸೇವೆ ದೇವರ ಸೇವೆಗೆ ಸಮ ಎಂದು ಇಂಡಿಯನ್ ಡೆವಲಪ್‌ಮೆಂಟ್ ಫಾರ್ಮೇಶನ್ ಸಂಸ್ಥೆಯ ವ್ಯವಸ್ಥಾಪಕ ಎಚ್. ಗುರುಮೂರ್ತಿ ಹೇಳಿದರು.

ನಗರದ ವಿಠಲನಗರದ ಶ್ರೀಮಾನ್ಯ ವಯೋವೃದ್ಧಾಶ್ರಮಕ್ಕೆ ಬುಧವಾರ 10 ಸಾವಿರ ರೂ. ಮೌಲ್ಯದ ಅಕ್ಕಿ ವಿತರಿಸಿ ಮಾತನಾಡಿದರು.

ಪ್ರಸ್ತುತ ಹೆತ್ತ ಮಕ್ಕಳಿಗೆ ಅವರನ್ನು ಹೆತ್ತವರೇ ಭಾರವಾಗಲಾರಂಭಿಸಿದ್ದಾರೆ. ಅವರನ್ನು ಸಲಹಲಾಗದೆ ವೃದ್ಧಾಶ್ರಮಗಳಿಗೆ ಕಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾತ್ಯತೀತವಾಗಿ ವಯೋವೃದ್ಧರನ್ನು ಸಲಹುತ್ತಿರುವ ಶ್ರೀಮಾನ್ಯ ವೃದ್ಧಾಶ್ರಮ ಸೇವೆ ಅನನ್ಯವಾದುದು ಎಂದರು.

ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಲು ಮನೆಯಲ್ಲಿ ಹಿರಿಯರ ಅಗತ್ಯವಿದೆ. ಇದೀಗ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಬಿಡುವ ಮಕ್ಕಳಿಗೆ ಕಾಲವೇ ಉತ್ತರ ನೀಡಲಿದೆ. ಕೌಟುಂಬಿಕ ಜೀವನ ನಡೆಸಿ ಆಶ್ರಮ ಸೇರಿರುವ ಯಾವ ವಯೋವೃದ್ಧರು ಚಿಂತೆಗೊಳಗಾಗದೆ ನೆಮ್ಮದಿ ಬದುಕು ಸಾಗಿಸಬೇಕೆಂದು ಕಿವಿಮಾತು ಹೇಳಿದರು.

ವೃದ್ಧಾಶ್ರಮದ ಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ ಮಾತನಾಡಿ, ಬದುಕಿನ ಅನುಭವ ಕಂಡುಕೊಂಡ ಹಿರಿಯ ಜೀವಗಳು ಕೊನೆ ದಿನಗಳಲ್ಲಿ ನೋವು ಅನುಭವಿಸಬಾರದು. ಆದರೆ ಮಕ್ಕಳ ಸ್ವಾರ್ಥದಿಂದ ಅವರಿಂದು ಕೌಟುಂಬಿಕ ಜೀವನದಿಂದ ದೂರಾಗುತ್ತಿದ್ದಾರೆ. ಇವರಿಗೆ ಆಶ್ರಯ ನೀಡಲೆಂದು ವೃದ್ಧಾಶ್ರಮ ಆರಂಭಿಸಲಾಗಿದೆ. ಇದೀಗ 30 ವಯೋವೃದ್ಧರು ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಇದು ಯಾವುದೇ ಪ್ರತಿಫಲವಿಲ್ಲ ಸೇವೆ. ಇದಕ್ಕೆ ಸಮಾಜವೂ ಸ್ಪಂದಿಸುತ್ತಿದೆ. ಉಳ್ಳವರು ಅಕ್ಕಿ ಇನ್ನಿತರ ದವಸಧಾನ್ಯಗಳನ್ನು ನೀಡಿ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.

ಆಶ್ರಮದಲ್ಲಿ ವಯಸ್ಸಾದವರು, ಆರೋಗ್ಯ ಸರಿ ಇಲ್ಲದವರು ಓಡಾಡುವ ಪರಿಸ್ಥಿತಿಯಲ್ಲಿಲ್ಲ. ಅಂತವರ ಅನುಕೂಲಕ್ಕಾಗಿ ವಾರಕ್ಕೊಮ್ಮೆ ಸ್ಥಳೀಯ ಸ್ಥಳೀಯ ಸರ್ಕಾರಿ ಆಸ್ಪತ್ರೆಯಿಂದ ವೈದ್ಯರನ್ನು ಕಳಿಸಿ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಿಕೊಡಬೇಕೆಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.

ವೃದ್ಧಾಶ್ರಮ ನಿಲಯ ಪಾಲಕ ಎಂ. ತಿಪ್ಪೇಸ್ವಾಮಿ, ಕಲಾವಿದ ಪಗಡಲಬಂಡೆ ಎಚ್. ನಾಗೇಂದ್ರಪ್ಪ ಇದ್ದರು.