ಪ್ರೌಢಶಾಲೆ ನೂತನ ಕಟ್ಟಡಕ್ಕೆ 2 ಕೋಟಿ

ಚಳ್ಳಕೆರೆ: ವಜ್ರ ಮಹೋತ್ಸವ ಆಚರಿಸಿಕೊಳ್ಳಲಿರುವ ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆಯಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ ವಜ್ರ ಮಹೋತ್ಸವದ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಗಣಪತಿ ಪ್ರತಿಷ್ಠಾಪನೆ ಮತ್ತು ಹೋಮ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ನಗರದಲ್ಲಿ ಒಂದು ಮಾದರಿ ಶಾಲೆಯಾಗಿದೆ. ಇಲ್ಲಿ ಓದಿರುವ ಅನೇಕ ಮಹನೀಯರು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಮತ್ತು ರಾಜಕೀಯ ರಂಗದಲ್ಲೂ ಶಾಸಕರು ಮತ್ತು ಮಂತ್ರಿಗಳಾಗಿ ಸೇವೆ ಮಾಡಿರುವ ಭಾಗ್ಯ ಇದೆ ಎಂದರು.

ವಿದ್ಯೆ ಕಲಿಸಿದ ಶಾಲೆಯನ್ನು ಸ್ಮರಿಸುವ ಕೆಲಸ ಆಗಬೇಕು. ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶಾಲೆಯ ಸಂಭ್ರಮಕ್ಕೆ ಇಲ್ಲಿ ಓದಿರುವ ಹಳೇ ವಿದ್ಯಾರ್ಥಿಗಳು ಒಂದುಗೂಡಿ ಸಂಘ ಸ್ಥಾಪನೆ ಮಾಡಿಕೊಂಡಿರುವುದು ಸಮಾಜಕ್ಕೆ ಒಂದು ಮಾದರಿ ಕೆಲಸವಾಗಿದೆ. ಇದರಿಂದ ಪ್ರೇರಿತಗೊಂಡು ನಾನೂ ಓದಿರುವ ಕಡಬನಕಟ್ಟೆ ಶಾಲೆಯಲ್ಲೂ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಶಾಲಾ ಶತಮಾನೋತ್ಸವ ಆಚರಿಸುವ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಸಮಾಜದಲ್ಲಿನ ಹಳೆ ಶಾಲೆಗಳ ಇತಿಹಾಸವನ್ನು ಉಳಿಸಿಕೊಳ್ಳಲು ಶಾಲಾ ದಾಖಲಾತಿಗಳು ಸೇರಿ ಶಾಲೆಯಲ್ಲಿ ಸಂಗ್ರಹಿಸಿದ ವಸ್ತುಗಳನ್ನು ಪೋಷಣೆ ಮಾಡುವ ಕೆಲಸ ಆಗಬೇಕು. ಇದರಿಂದ ಯುವ ಸಮುದಾಯಕ್ಕೆ ಮಾರ್ಗದರ್ಶನ ಮತ್ತು ಒಳ್ಳೆಯ ಸಾಧನೆಗೆ ದಾರಿ ಆಗಲಿದೆ ಎಂದರು.

ಮುಖ್ಯ ಶಿಕ್ಷಕ ಸಂಪತ್‌ಕುಮಾರ್ ಮಾತನಾಡಿ, ಮುಂದಿನ ವರ್ಷ ವಜ್ರ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಕೆಲ ಹಳೇ ವಿದ್ಯಾರ್ಥಿಗಳು ನಮ್ಮ ಸಂಪರ್ಕಕ್ಕೆ ಬಂದಿದ್ದಾರೆ. ಮಹೋತ್ಸವದ ಆರಂಭವಾಗಿ ನಡೆಯಲಿರುವ ಗಣಪತಿ ವಿಗ್ರಹ ಸ್ಥಾಪನೆ ಮತ್ತು ಹೋಮ ಪೂಜಾ ಕಾರ್ಯದಲ್ಲಿ ಕೆಲವರು ಮಾತ್ರ ಭಾಗವಹಿಸಿದ್ದಾರೆ. ಮಹೋತ್ಸವದ ಸಂಭ್ರಮಕ್ಕೆ ಎಲ್ಲ ಹಳೇ ವಿದ್ಯಾರ್ಥಿಗಳ ಉಪಸ್ಥಿತಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಾಲೆಯ ಹಳೆ ವಿದ್ಯಾರ್ಥಿಗಳಾದ ಬಿ.ಸುರೇಶ್ ಬಾಬು, ಕೆ.ಸಿ.ನಾಗರಾಜ್, ರಾಮಚಂದ್ರಪ್ಪ, ನರಸಿಂಹಮೂರ್ತಿ, ಮುಖಂಡರಾದ ಸಿ.ಟಿ.ಶ್ರೀನಿವಾಸ್, ಕೆ.ವೀರಭದ್ರಯ್ಯ, ಆರ್.ಪ್ರಸನ್ನಕುಮಾರ್, ಟಿ. ಮಲ್ಲಿಕಾರ್ಜುನ, ಎಸ್.ಮುಜೀಬುಲ್ಲಾ, ರಮೇಶ್‌ಗೌಡ, ಭರಮಯ್ಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *