ಒಳಮೀಸಲಾತಿ ಜಾರಿಗೆ ಸರ್ಕಾರಗಳ ಇಚ್ಛಾಶಕ್ತಿ ಕೊರತೆ

ಚಳ್ಳಕೆರೆ: ಸರ್ಕಾರಗಳು ಒಳಮೀಸಲಾತಿ ಜಾರಿಗೊಳಿಸಲು ಇಚ್ಛಾಶಕ್ತಿ ತೋರದ ಕಾರಣ ಸಮುದಾಯದ ದಶಕಗಳ ಹೋರಾಟಕ್ಕೆ ಮಾನ್ಯತೆ ದೊರೆತಿಲ್ಲ ಎಂದು ಕೋಡಿಹಳ್ಳಿ ಆದಿಜಾಂಬವ ಶ್ರೀ ಷಡಾಕ್ಷರಿಮುನಿ ಸ್ವಾಮೀಜಿ ಹೇಳಿದರು.

ತಾಲೂಕಿನ ಗಡಿಗ್ರಾಮ ಸಿರಿವಾಳ ಓಬಳಾಪುರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಂ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷೃ ತೋರುತ್ತಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಳಮೀಸಲಾತಿ ಸಂಬಂಧಿಸಿದಂತೆ ಉಪ ಸಮಿತಿ ರಚನೆ ನೆಪವೊಡ್ಡಿ ವಂಚಿಸಿದ್ದಾರೆ ಎಂದರು.

ರಾಜ್ಯದ ಶಿಫಾರಸಿಗೆ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಸಮುದಾಯ ಸ್ವಾಗತಿಸುತ್ತದೆ. ಕೇಂದ್ರಕ್ಕೆ ವರದಿ ಸಲ್ಲಿಸದೇ ಹೋರಾಟವನ್ನು ಹತ್ತಿಕ್ಕುತ್ತಿರುವ ರಾಜ್ಯದ ರಾಜಕಾರಣಿಗಳಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದರು.

ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಜಾತಿ, ಲಿಂಗ ತಾರತಮ್ಯದಿಂದ ಸಮಾಜ ರೋಗಗ್ರಸ್ಥವಾಗುತ್ತಿದೆ. ಬುದ್ಧನ ನಂತರ ಸಾಮಾಜಿಕ ಮೌಢ್ಯ, ಜಾತಿ ಪದ್ಧತಿ ನಿವಾರಣೆಗೆ ಬಸವಣ್ಣನವರ ಹೋರಾಟ ಮಾದರಿಯಾಯಿತು ಎಂದರು.

ಸಮ ಸಮಾಜ ನಿರ್ಮಾಣಕ್ಕೆ ರಾಜಕೀಯ ಅಧಿಕಾರ ಅಗತ್ಯ. ಸಂಘಟನೆಯಿಂದ ಮಾತ್ರ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ ಎಂದು ಹೇಳಿದರು.

ತಾಪಂ ಸದಸ್ಯ ಕೆ.ಟಿ. ತಿಮ್ಮಾರೆಡ್ಡಿ, ಜಿಪಂ ನಾಮನಿರ್ದೇಶಿತ ಸದಸ್ಯ ಮೊಗಲಹಳ್ಳಿ ಜಯಣ್ಣ, ನಗರಸಭೆ ಮಾಜಿ ಉಪಾಧ್ಯಕ್ಷ ಟಿ. ವಿಜಯಕುಮಾರ್, ಮುಖಂಡರಾದ ಭೀಮನಕೆರೆ ಶಿವಮೂರ್ತಿ, ಚನ್ನಗಾನಹಳ್ಳಿ ಮಲ್ಲೇಶಿ, ಒ. ರಾಜಣ್ಣ ಇತರರಿದ್ದರು.

ದಿವ್ಯಸಾನ್ನಿಧ್ಯ ಬರೆಯಬೇಡಿ: ಪೂರ್ಣಕುಂಭ ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರು ಬರಿಗಾಲಲ್ಲಿ ನಡೆವ ಅಗತ್ಯವಿಲ್ಲ. ಕುಂಭದಲ್ಲಿ ದೇವರಿರುವುದಿಲ್ಲ. ನಿಮ್ಮ ಭಾಗವಹಿಸುವಿಕೆ ಪ್ರಧಾನವಾಗಿರುತ್ತದೆ ಎಂದು ಶ್ರೀಗಳು ಹೇಳಿದರು. ಇನ್ನು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ನಮೂದಿಸುವಾಗ ದಿವ್ಯ ಸಾನ್ನಿಧ್ಯ ಎನ್ನುವ ಬದಲು ಆಶಯ ನುಡಿ ಎಂಬುದಾಗಿ ಬಳಸಿದರೆ ಸೂಕ್ತ ಎಂದು ಶ್ರೀಗಳು ಸಲಹೆ ನೀಡಿದರು.

Leave a Reply

Your email address will not be published. Required fields are marked *