ಕಲಾ ಶ್ರೀಮಂತಿಕೆ ಉಳಿವಿಗೆ ಪ್ರೋತ್ಸಾಹ ಅಗತ್ಯ

ಚಳ್ಳಕೆರೆ: ನಾಡಿನ ಕಲಾ ಶ್ರೀಮಂತಿಕೆ ಉಳಿಸಲು ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಜಾನಪದ ಅಕಾಡೆಮಿ ಸದಸ್ಯ ಕಾಲ್ಕೆರೆ ಚಂದ್ರಪ್ಪ ತಿಳಿಸಿದರು.
ನೃತ್ಯ ನಿಕೇತನ, ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರದ 33ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಬಿಎಂಜಿಎಚ್‌ಎಸ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಚಳ್ಳಕೆರೆ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ ತರಬೇತಿ ನೀಡಿ ಪ್ರತಿಭಾವಂತ ಕಲಾವಿದರನ್ನು ಹೊರತಂದಿದೆ. ಸಂಸ್ಥೆ ಕಲಾವಿದೆ ಸುಧಾಮೂರ್ತಿ ಅವರ ಕಲಾಸೇವೆ ಜಿಲ್ಲೆಗೆ ಕೀರ್ತಿ ತಂದಿದೆ ಎಂದು ಶ್ಲಾಘಿಸಿದರು.
ವಿಶ್ರಾಂತ ಪ್ರಾಚಾರ್ಯ ಜಿ.ಟಿ. ಚಂದ್ರಶೇಖರ್ ಮಾತನಾಡಿ, ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರ ನೀಡಬೇಕು. ಇದರಿಂದ ಬಾಲ್ಯದಲ್ಲೇ ಸಮಾಜಮುಖಿ ಚಿಂತನೆ ಬೆಳೆಯುತ್ತದೆ ಎಂದರು.
ಸಾಹಸ ಕಲಾವಿದ ಜ್ಯೋತಿರಾಜ್, ಕಲಾ ಪ್ರತಿಭೆ ಎಸ್‌ಕೆಆರ್ ಜಿಲಾನಿ ಸೇರಿದಂತೆ ವಿವಿಧ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರಸಭೆ ಸದಸ್ಯೆ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಶಿವಶಂಕರೇಗೌಡ, ಕಂದಾಯ ನಿರೀಕ್ಷಕಿ ಈರಮ್ಮ, ಯು.ಎಸ್. ವಿಷ್ಣುಮೂರ್ತಿರಾವ್, ಎಂ.ಎನ್. ಮೃತ್ಯುಂಜಯ ಇತರರಿದ್ದರು.