ಚಳ್ಳಕೆರೆಯಲ್ಲಿ ನಿರಾಶ್ರಿತರಿಗೆ ಶೆಡ್ ವಿತರಣೆ

ಚಳ್ಳಕೆರೆ: ಬೆಂಕಿ ಅವಘಡದಲ್ಲಿ ಗುಡಿಸಲು ಕಳೆದುಕೊಂಡ ನಿರಾಶ್ರಿತರಿಗೆ ಅನುಕೂಲವಾಗಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳನ್ನು ಶಾಸಕ ಟಿ.ರಘುಮೂರ್ತಿ, ಸಂಸದ ಬಿ.ಎನ್.ಚಂದ್ರಪ್ಪ ವಿತರಿಸಿದರು.

ಸಂಸದ ಚಂದ್ರಪ್ಪ ಮಾತನಾಡಿ, ಹಸಿದವರಿಗೆ ಅನ್ನ ನೀಡುವುದು ದೇವರ ಸೇವೆ ಸಲ್ಲಿಸಿದಂತೆ. ಬೆಂಕಿ ಅವಘಡ ನಡೆದ ದಿನದಿಂದಲೂ ಗಂಜಿಕೇಂದ್ರ ನಿರ್ವಹಣೆ ಮಾಡಿ ನಂತರ ತಾತ್ಕಾಲಿಕ ಶೆಡ್‌ಗಳನ್ನು ಶಾಸಕರು ನಿರ್ಮಿಸಿಕೊಟ್ಟಿದ್ದಾರೆ. ಈಗಾಗಲೇ ಲಿಡ್ಕರ್ ನಿಗಮದಿಂದ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಿರಾಶ್ರಿತರಿಗೆ ಪಾತ್ರೆ, ತಾಡಪಾಲ್, ಅಕ್ಕಿ ಸಾಮಗ್ರಿ ವಿತರಿಸಲಾಯಿತು. ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಬೆಸ್ಕಾಂ ಇಲಾಖೆ ಶಿವಪ್ರಸಾದ್ ಇದ್ದರು.

ಮಗನ ನೆನೆದು ಕಣ್ಣೀರಾದ ಶಾಸಕರು
ಗುಡಿಸಲು ಕಳೆದುಕೊಂಡು ನಮ್ಮ ಬದುಕು ಬೀದಿಪಾಲಾದ ಹೊತ್ತಿನಿಂದಲೂ ನಮ್ಮ ಸಹಾಯಕ್ಕೆ ಶಾಸಕರು ಬಂದಿದ್ದಾರೆ. ಪ್ರತ್ಯೇಕ ನಿವೇಶನ ಗುರುತಿಸಿ ಶಾಶ್ವತ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ. ನಮಗೆ ಹೊಸ ಬದುಕು ಕೊಟ್ಟಿದ್ದು, ಮನೆ ನಿರ್ಮಿಸಿರುವ ಬಡಾವಣೆಗೆ ಶಾಸಕರ ಮಗ ಅಭಿಷೇಕ್ ಅವರ ಹೆಸರಿಡಬೇಕು ಎಂದು ನಿರಾಶ್ರಿತರು ಮನವಿ ಮಾಡಿದರು. ಆಗ ಮಗನ ಅಗಲಿಕೆ ನನೆದು ಕಣ್ಣೀರಾದ ಶಾಸಕ ರಘುಮೂರ್ತಿ, ಏನೂ ಮಾತನಾಡದೆ ಅಲ್ಲಿಂದ ಹೊರನಡೆದರು.