ಚಳ್ಳಕೆರೆ: ತಾಲೂಕಿನ ಬೊಂಬೇರಹಳ್ಳಿ ಸಮೀಪ ವೇದಾವತಿ ನದಿ ಭಾಗದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬ್ಯಾರೇಜ್ನ ಕಳಪೆ ಕಾಮಗಾರಿ ಖಂಡಿಸಿ ಭಾನುವಾರ ರೈತ ಸಂಘದ ಕಾರ್ಯಕರ್ತರು ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
ಮರಳು ಇರುವ ಜಾಗದಲ್ಲಿ ಏಳೆಂಟು ಅಡಿ ಪಾಯ ತೋಡಿ ಕಾಮಗಾರಿ ನಡೆಸುತ್ತಿರುವುದನ್ನು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದರು. ನದಿಯಲ್ಲಿ ಮರಳು ಇರುವುದರಿಂದ ಗಟ್ಟಿ ನೆಲ ಸಿಗುವವರೆಗೆ ಗುಂಡಿ ತೆಗೆದು ತಳಪಾಯ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಹೊರತು ಯಾರಿಂದಲೂ ಕಾಮಗಾರಿ ತಡೆಯಲು ಸಾಧ್ಯವಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಭೀಮರಾಜು ಉಡಾಫೆಯಾಗಿ ಉತ್ತರಿಸಿದ್ದಾರೆ ಎಂದು ಆಪಾದಿಸಿ ಕಾಮಗಾರಿಗೆ ತಡೆ ಒಡ್ಡಿದರು. ಗಟ್ಟಿ ನೆಲ ಸಿಗುವವರೆಗೆ ಗುಂಡಿ ತೆಗೆದು ಕಾಮಗಾರಿ ನಡೆಸಬೇಕು. ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಅಂತರ್ಜಲ ವೃದ್ಧಿಗೆ ನಿರ್ಮಿಸುತ್ತಿರುವ ಬ್ಯಾರೇಜ್ ಕಾಮಗಾರಿ ಶಾಶ್ವತವಾಗಿ ಉಳಿಯಬೇಕು. ಸುತ್ತಲಿನ ಸಾವಿರಾರು ಎಕರೆ ಕೃಷಿ ಭೂಮಿಗೆ ಅನುಕೂಲವಾಗಬೇಕು ಎಂದು ರೈತ ಮುಖಂಡರು ತಾಕೀತು ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಗ್ರಾಪಂ ಸದಸ್ಯ ವಿ. ಬೆಟ್ಟಪ್ಪ, ಮುಖಂಡರಾದ ಶ್ರೀಕಂಠಮೂರ್ತಿ, ಬಸವರಾಜು, ತಿರುವಳ್ಳಪ್ಪ, ಧರ್ಮ, ಪ್ರಕಾಶ ಇತರರಿದ್ದರು.