ಚಳ್ಳಕೆರೆಯಲ್ಲಿ ಪೋಸ್ಟ್ ಮಾಸ್ಟರ್‌ಗಳಿಗೆ ಅನುಮತಿ ಪತ್ರ ವಿತರಣೆ

ಚಳ್ಳಕೆರೆ: ಗ್ರಾಮೀಣರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಅಂಚೆ ಸೇವೆ ಮೂಲಕ ಕಡಿಮೆ ಕಂತಿನ ಹೆಚ್ಚು ಲಾಭ ನೀಡುವ ವಿಮಾ ಯೋಜನೆ ಜಾರಿಗೊಳಿಸಿದೆ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಶಿವರಾಜ್ ಬಂಡೀಮಠ್ ತಿಳಿಸಿದರು.
ನಗರದ ನೌಕರರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮೀಣ ಅಂಚೆ ಜೀವ ಮೇಳ ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್‌ಗಳಿಗೆ ಅನುಮತಿ ಪತ್ರ ವಿತರಿಸಿ ಮಾತನಾಡಿದರು.
ಕೂಲಿಯನ್ನೇ ಆಧಾರವಾಗಿಸಿಕೊಂಡಿರುವ ಗ್ರಾಮೀಣ ಕಾರ್ಮಿಕ ಕುಟುಂಬಗಳಿಗೆ ವಿಮಾ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಸಣ್ಣ ಉಳಿತಾಯದಲ್ಲಿ ಜೀವಕ್ಕೆ ಮತ್ತು ಕುಟುಂಬಕ್ಕೆ ಆಧಾರವಾಗುವ ಯೋಜನೆಯನ್ನು ಇಲಾಖೆ ಆರಂಭಿಸಿದೆ. ಈ ಬಗ್ಗೆ ಗ್ರಾಮೀಣರಿಗೆ ಜಾಗೃತಿ ಮೂಡಿಸುವ ಕೆಲಸ ಅಂಚೆ ಸಿಬ್ಬಂದಿ ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಜನತೆ ಸೌಲಭ್ಯಗಳ ಮಾಹಿತಿ ಇಲ್ಲದೆ ಸದುಪಯೋಗ ಪಡೆಯುವುದಿಲ್ಲ. ವಿಮೆ ಬಗ್ಗೆ ನೌಕರರು ತಿಳಿಸುವ ಮೂಲಕ ಇಲಾಖೆ ಸೌಲಭ್ಯಗಳ ಬಳಕೆಗೆ ಮುಂದಡಿ ಇಡಬೇಕು. ಇನ್ನು ಮುಂದೆ ಅಂಚೆ ಖಾತೆ ಮೂಲಕವೇ ಗ್ರಾಹಕರ ಇತರ ಸೇವೆಗಳನ್ನು ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಸಹಾಯಧನದ ಸೌಲಭ್ಯವೂ ಅಂಚೆ ಗ್ರಾಹಕರ ಖಾತೆಗೆ ಜಮಾ ಆಗುತ್ತದೆ. ಹಣ ವರ್ಗಾವಣೆ, ಸಾಮಾಜಿಕ ಭದ್ರತೆ ಸೇರಿ ಪಿಂಚಣಿ ಸೌಲಭ್ಯವೂ ಸಿಗುತ್ತದೆ ಎಂದು ತಿಳಿಸಿದರು.
ಅಂಚೆ ನಿರೀಕ್ಷಕ ಕೆ.ಎಂ. ನರೇಂದ್ರನಾಯ್ಕ, ಐಪಿಪಿ ಮ್ಯಾನೇಜರ್ ಮಂಜುನಾಥ, ಇಲಾಖೆಯ ರಾಧಾಕೃಷ್ಣ, ವೀರಭದ್ರಪ್ಪ, ತಿಪ್ಪೇಸ್ವಾಮಿ, ಸಿಬ್ಬಂದಿ ಮೈಲನಹಳ್ಳಿ ನಾಗರಾಜ, ಕೆ.ಟಿ. ತಿಮ್ಮಾರೆಡ್ಡಿ, ರಾಘವೇಂದ್ರ ಮತ್ತಿತರರಿದ್ದರು.