ನೀಗದ ವೆಂಕಟೇಶ್ವರ ನಗರ ನಿವಾಸಿಗಳ ಸಂಕಟ

ಚಳ್ಳಕೆರೆ: ಅನೈರ್ಮಲ್ಯದಿಂದ ಇಲ್ಲಿನ ವೆಂಕಟೇಶ್ವರ ನಗರ ಸಮೀಪದ ಕೆರೆಯಂಗಳದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಗುಡಿಸಲುಗಳ ಸುತ್ತಮುತ್ತಲ ತಗ್ಗು-ಗುಂಡಿಗಳಲ್ಲಿ ಮಳೆಯ ನೀರು ತುಂಬಿಕೊಂಡಿದೆ. ಸೊಳ್ಳೆ, ಹಂದಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಆರು ತಿಂಗಳಲ್ಲಿ ಎರಡು ತಿಂಗಳ ಮಗು ಸೇರಿ ಎಂಟು ಮಂದಿ ಜ್ವರ ಮತ್ತಿತರ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕೊಟ್ರೇಶ್, ದಲಿತ ಮುಖಂಡ ಹೊನ್ನೂರು ಸ್ವಾಮಿ ದೂರಿದ್ದಾರೆ.

ಸ್ವಚ್ಛತೆ ಕಾರ್ಯ ಕೈಗೊಳ್ಳುವಂತೆ ನಗರಸಭೆ, ತಾಲೂಕು ಆಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜತೆಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಿಂದಲೂ ಯಾವುದೇ ಜಾಗೃತಿ ಕಾರ್ಯ ನಡೆಯುತ್ತಿಲ್ಲ. ಕೂಲಿ ಮಾಡಿಕೊಂಡು ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ಇಲ್ಲಿನ ಜನರಿಗೆ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಮಳೆ ಹೆಚ್ಚಾದರೆ ಕೆರೆ ತುಂಬಿ ಗುಡಿಸಲುಗಳಲ್ಲಿ ನೀರು ನುಗ್ಗುತ್ತದೆ. ಸಣ್ಣ ಮಕ್ಕಳನ್ನು ಕಟ್ಟಿಕೊಂಡು ನೀರು ತುಂಬಿದ್ದ ನಡುಗಡ್ಡೆಗಳಲ್ಲಿ ಜೀವನ ನಡೆಸಬೇಕಿದೆ. ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗುತ್ತಿಲ್ಲ ಎಂದು ನಿವಾಸಿಗಳಾದ ಯುವರಾಜ ಗೋಸಾಯಿ, ಸಂತೋಷ್, ಕೆಂಪಬಾಯಿ, ಗೀತಾಬಾಯಿ, ರಾಮುಡು ಅಳಲು ತೋಡಿಕೊಂಡಿದ್ದಾರೆ.