ಸಮರ್ಪಕ ಬಿತ್ತನೆ ಬೀಜ ವಿತರಣೆಗೆ ಕ್ರಮ

ಚಳ್ಳಕೆರೆ: ತಾಲೂಕಿನ ರೈತರಿಗೆ ಸಮರ್ಪಕವಾಗಿ ಬಿತ್ತನೆಗೆ ಶೇಂಗಾ ಬೀಜ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಾರುತಿ ತಿಳಿಸಿದರು.

ತಾಲೂಕಿನ ಕಸಬಾ, ತಳುಕು, ನಾಯಕನಹಟ್ಟಿ, ಪರಶುರಾಮಪುರ ಹೋಬಳಿ ಕೇಂದ್ರಗಳಲ್ಲಿ ತಲಾ ಎರಡು ವಿತರಣಾ ಕೇಂದ್ರ ಸೇರಿ ದೊಡ್ಡ ಉಳ್ಳಾರ್ತಿಯಲ್ಲೂ ಶನಿವಾರದಿಂದ ಬಿತ್ತನೆ ಶೇಂಗಾ ವಿತರಾಡಲಾಗುತ್ತಿದೆ ಎಂದು ಸುದ್ದಿಗಾರರಿಗೆ ಶುಕ್ರವಾರ ಮಾಹಿತಿ ನೀಡಿದರು.

ತಾಲೂಕಿನಲ್ಲಿ 100850 ಹೆಕ್ಟೇರ್ ಬಿತ್ತನೆ ಭೂಮಿ ಇದ್ದು, ಇದರಲ್ಲಿ 85 ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಗುರಿ ಇದೆ. ಕಳೆದ ವರ್ಷ 12500 ಸಾವಿರ ಕ್ವಿಂಟಲ್ ಶೇಂಗಾ ವಿತರಣೆ ಮಾಡಲಾಗಿತ್ತು. ಇದರ ಅನುಸಾರ ಪ್ರಸ್ತುತ ಮುಂಗಾರು ಬಿತ್ತನೆಗೆ ಬೇಕಾದ ಶೇಂಗಾ ಮತ್ತು ತೊಗರಿ, ಹೆಸರು ಸೇರಿದಂತೆ ಇತರ ಬಿತ್ತನೆ ಬೀಜದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಉತ್ತಮ ಗುಣಮಟ್ಟದ ಕೆಒಎಫ್, ಎನ್‌ಎಸ್‌ಕೆ, ಕೆಎಸ್‌ಎಸ್ ನಿಗಮಗಳಿಂದ ಈಗಾಗಲೇ 2 ಸಾವಿರ ಕ್ವಿಂಟಲ್ ಶೇಂಗಾ ದಾಸ್ತಾನು ಮಾಡಿಕೊಳ್ಳಲಾಗಿದೆ. ಒಬ್ಬರಿಗೆ 30 ಕೆಜಿಯ 4 ಶೇಂಗಾ ಪಾಕೆಟ್ ವಿತರಣೆ ಮಾಡಲಾಗುತ್ತದೆ. 6700ಕ್ಕೆ ಖರೀದಿ ಮಾಡಿರುವ ಶೇಂಗಾವನ್ನು ಸಾಮಾನ್ಯ ವರ್ಗದ ರೈತರಿಗೆ 1400, ಎಸ್ಸಿ-ಎಸ್ಟಿಯವರಿಗೆ 2100 ರೂ. ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಬೆಳೆ ವಿಮೆ: ರೈತರ ಬೇಡಿಕೆಯಾಗಿರುವ ಬೆಳೆವಿಮೆ ಬಗ್ಗೆ ಮೇಲಧಿಕಾರಿಗಳಿಂದ ಯಾವುದೇ ಲಿಖಿತ ಮಾಹಿತಿ ಬಂದಿಲ್ಲ. ಜೂನ್ ತಿಂಗಳ 25ರೊಳಗೆ ಕೃಷಿಕರ ಬ್ಯಾಂಕ್ ಖಾತೆಗೆ ಬೆಳೆವಿಮೆ ಜಮಾ ಆಗಲಿದೆ ಎನ್ನಲಾಗುತ್ತಿದೆ ಎಂದು ತಿಳಿಸಿದರು.

ಶೇಂಗಾ ವಿತರಣೆಗೆ ಸರ್ಕಾರ ಸಬ್ಸಿಡಿ ನೀಡಿದರೂ ಬರಗಾಲದ ಹಿನ್ನೆಲೆಯಲ್ಲಿ ರೈತರು ಖರೀದಿಸುವುದು ಕಷ್ಟ. ಕಳೆದ ಹತ್ತು ವರ್ಷದಿಂದ ಬರಪೀಡಿತ ತಾಲೂಕಿನ ಕೃಷಿಕರಿಗೆ ಬೆಳೆ ಪರಿಹಾರ, ಬೆಳೆ ವಿಮೆ ಸಿಕ್ಕಿಲ್ಲ. ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ಕೃಷಿ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ ಎಂದು ರೆಡ್ಡಿಹಳ್ಳಿ ವೀರಣ್ಣ ಎಚ್ಚರಿಸಿದರು.

Leave a Reply

Your email address will not be published. Required fields are marked *