ಬಸ್ ನಿಲ್ದಾಣದಿಂದ 2.5 ಕಿಮೀ ರಸ್ತೆ ವಿಸ್ತರಣೆಗೆ ಕ್ರಮ

ಚಳ್ಳಕೆರೆ: ನಗರದ ಖಾಸಗಿ ಬಸ್ ನಿಲ್ದಾಣದಿಂದ ಹೊರವಲಯದ ಅಜ್ಜನಗುಡಿ ದೇವಸ್ಥಾನ ವರೆಗಿನ 2.5 ಕಿಮೀ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ನಗರದ ರಸ್ತೆ ವಿಸ್ತರಣೆ ಜಾಗಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಶಾಸಕರು, ಈಗಾಗಲೇ ಸಿಆರ್‌ಎಫ್ ಯೋಜನೆಯಿಂದ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ರಸ್ತೆಯ ಮಧ್ಯಭಾಗದಿಂದ 9.5 ಮೀಟರ್ ವಿಸ್ತರಣೆಗೆ ನಿಗದಿಪಡಿಸಲಾಗಿತ್ತು. ಆದರೆ, ಅಕ್ಕಪಕ್ಕದಲ್ಲಿ ಬಹಳಷ್ಟು ವಾಸದ ಮನೆಗಳಿಗೆ ತೊಂದರೆ ಆಗುತ್ತದೆ ಎಂಬ ದೃಷ್ಟಿಯಿಂದ 2 ಮೀಟರ್ ಕಡಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಚಿದಾನಂದ, ಇಂಜಿನಿಯರ್ ಲೋಕೇಶ್, ತಾಪಂ ಸದಸ್ಯ ವೀರೇಶ್, ಮುಖಂಡರಾದ ಅತಿಕುರ್ ರೆಹಮಾನ್, ಹನುಮಂತಪ್ಪ ಇದ್ದರು.