ಸೈದ್ಧಾಂತಿಕ ಪಕ್ಷ ಸ್ಥಾಪನೆ

ಚಳ್ಳಕೆರೆ: ದೇಶದ ಹಿತ ಚಿಂತನೆ ಮಾಡಿದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಜನಸಂಘ ಎಂಬ ಸೈದ್ಧಾಂತಿಕ ಪಕ್ಷ ಸ್ಥಾಪಿಸಿ ದೇಶದ ಪ್ರಗತಿಗೆ ದಾರಿ ಮಾಡಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಎನ್.ಜಯರಾಂ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವತಂತ್ರ ಭಾರತದಲ್ಲಿ ಸಮಾನತೆಯ ಆಡಳಿತ ಇರಲಿಲ್ಲ. ಬಂಡವಾಳ ಮತ್ತು ಆಡಳಿತ ಶಾಹಿಗಳ ಕೈಯಲ್ಲಿ ಆಡಳಿತವಿತ್ತು. ಇದನ್ನು ಸರಿ ದಾರಿಗೆ ತರುವ ಪ್ರಯತ್ನ ಮುಖರ್ಜಿ ನೇತೃತ್ವದ ಸಂಘಟನೆ ಕೈಗೊಂಡ ಪ್ರತಿಫಲ ಜನಸಂಘ ಪಕ್ಷ ಸ್ಥಾಪನೆ. ಇದರಿಂದ ಸಮರ್ಥ ಪ್ರಜಾಪ್ರಭುತ್ವ ಬೆಳವಣಿಗೆಗೆ ಅವಕಾಶವಾಯಿತು ಎಂದು ಹೇಳಿದರು.

ವಾಜಪೇಯಿ ಸೇರಿ ಅನೇಕ ಪ್ರಭಾವಿ ನಾಯಕರು ಜನಸಂಘದಿಂದ ಚುನಾಯಿತರಾಗಿ ದೇಶದ ಅಭಿವೃದ್ಧಿಗೆ ಉತ್ತಮ ಆಡಳಿತ ನೀಡಿದ್ದು, ಇದೆಲ್ಲದರ ಕೀರ್ತಿ ಮುಖರ್ಜಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ ಮಾತನಾಡಿ, ಮುಖರ್ಜಿ ಅವರ ಸಾವಿನ ಬಗ್ಗೆ ಅಂದಿನ ಆಡಳಿತ ಪಕ್ಷ ಸರಿಯಾದ ತನಿಖೆ ಕೈಗೊಳ್ಳಲಿಲ್ಲ. ಅಂದಿನ ಪ್ರಧಾನಿ ನೆಹರು ಪಕ್ಷಪಾತ ಧೋರಣೆ ಅನುಸರಿಸುವುದರ ಮೂಲಕ ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದ್ದರು ಎಂದು ದೂರಿದರು.

ನಗರಸಭಾ ಮಾಜಿ ಸದಸ್ಯ ಎಂ.ಶಿವಮೂರ್ತಿ, ಮುಖಂಡರಾದ ಕರಿಕೆರೆ ತಿಪ್ಪೇಸ್ವಾಮಿ, ಜಿ.ಕೆ.ಈರಣ್ಣ, ವಿಜಯೇಂದ್ರ, ಕಾಟಪ್ಪನಹಟ್ಟಿ ವೀರೇಶ್, ಸದಾನಂದ, ಈಶ್ವರನಾಯಕ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *