ನಿರೀಕ್ಷಿತ ಮಳೆ ಇಲ್ಲದೆ ಬರಗಾಲ

ಚಳ್ಳಕೆರೆ: ಭೂ ಮಂಡಲದಲ್ಲಿ ಜೀವಿಸುವ ಸಕಲ ಜೀವರಾಶಿಗೂ ಪರಿಸರವೇ ಆಧಾರವೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಫಕೀರಪ್ಪ ಹೇಳಿದರು.

ನಗರದ ಮಹಾದೇವ ವಿಶ್ವಕರ್ಮ ವಿದ್ಯಾಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ನಿರೀಕ್ಷಿತ ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರದ ಕಾಳಜಿ ಬೆಳೆಸಿಕೊಂಡು ಮನೆ ಸಮೀಪ ಗಿಡ ನೆಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಸರಸ್ವತಮ್ಮ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಗಿಡಮರಗಳು ಕಡಿಮೆಯಾಗಿ ಪರಿಸರ ನಾಶವಾಗುತ್ತಿದೆ. ಇದರಿಂದ ಅಂತರ್ಜಲ ಕುಸಿತವಾಗಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಶಾಲಾ ಅಧ್ಯಕ್ಷ ಆರ್.ಶ್ರೀನಿವಾಸಚಾರ್, ವಲಯ ಮೇಲ್ವಿಚಾರಕಿ ಸರಸ್ವತಿ, ಸಹ ಶಿಕ್ಷಕರಾದ ಜಯಾ ಹೆಗಡೆ, ದಿವ್ಯಾ, ರಂಜಿತ್ ಕುಮಾರ್, ಶಶಿಕಲಾ, ಪರಿಮಳಾ ಉಪಸ್ಥಿತರಿದ್ದಾರೆ.