ಚಳ್ಳಕೆರೆ ವೀರಭದ್ರಸ್ವಾಮಿ ರಥೋತ್ಸವ

ಚಳ್ಳಕೆರೆ: ನಗರದಲ್ಲಿ ಶನಿವಾರ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ನೆರೆದಿದ್ದ ಭಕ್ತರು ತೇರಿನ ಕಳಸಕ್ಕೆ ಬಾಳೆಹಣ್ಣು, ಹೂವು ತೂರಿ ಹರಕೆ ತೀರಿಸಿದರು.

ವೈಶಾಖ ಮಾಸದ ವಿಶಾಖ ನಕ್ಷತ್ರ, ಹುಣ್ಣಿಮೆಯಂದು ಶ್ರೀಸ್ವಾಮಿ ರಥೋತ್ಸವ ಜರುಗುವುದು ವಿಶೇಷ. ಇದರ ನಿಮಿತ್ತ ಎಂಟು ದಿನಗಳ ಕಾಲ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.

ದೇವಸ್ಥಾನ ಸಮಿತಿ ಸದಸ್ಯರು ಹಾಗೂ 12 ಕೈವಾಡಸ್ಥರ ಸಮ್ಮುಖದಲ್ಲಿ ಮೇ 14ರಂದು ಜಾತ್ರೆಯ ಕಂಕಣಧಾರಣೆ ನಡೆಸಿದ್ದರು. ಈ ಕಾರ್ಯವಾದ ಬಳಿಕ ರಥೋತ್ಸವ ನಡೆಯುವವರೆಗೆ ಯಾರ ಮನೆಯಲ್ಲೂ ಮಾಂಸದೂಟ, ಒಲೆಯ ಮೇಲೆ ಹೆಂಚು ಇಡುವಂತಿಲ್ಲ. ಮುದ್ದೆ ಕೋಲು ಬಳಕೆ ನಿಷಿದ್ಧ. ಈ ಆಚರಣೆ ನೋಡಲು ವಿವಿಧ ಜಿಲ್ಲೆಗಳ ಭಕ್ತರು ಆಗಮಿಸುತ್ತಾರೆ.

8 ದಿನಗಳ ಜಾತ್ರಾ ವಿಶೇಷತೆಯಲ್ಲಿ ಅಗ್ನಿಕುಂಡ ಸೇರಿ ವಿಶೇಷ ಪೂಜಾಕಾರ್ಯಗಳ ನಂತರವೇ ಕಂಕಣಧಾರಣೆ ವಿಸರ್ಜನೆ ಮಾಡಲಾಗುತ್ತದೆ. ಶಾಸಕ ಟಿ.ರಘುಮೂರ್ತಿ, ನಗರಸಭೆಯ ಸದಸ್ಯರು ಹಾಗೂ ಮುಖಂಡರು ಭಾಗವಹಿಸಿದ್ದರು.

ಜಾತ್ರೆ ಹಿನ್ನೆಲೆ: ಹರ್ತಿ ಎಂಬ ಗ್ರಾಮದ ಭಕ್ತರು ಹಂಪಿಯಿಂದ ವೀರಭದ್ರಸ್ವಾಮಿ ದೇವರ ಮೂರ್ತಿಯನ್ನು ಎತ್ತಿನ ಗಾಡಿಯಲ್ಲಿ ಕೊಂಡೊಯ್ಯುವ ಮಾರ್ಗ ಮಧ್ಯದ ಚಳ್ಳಕೆರೆಯಲ್ಲಿ ಉಳಿದುಕೊಂಡಿದ್ದರು. ಆ ರಾತ್ರಿ ಗಾಡಿಯಲ್ಲಿದ್ದ ದೇವರ ಮೂರ್ತಿ ನೆಲಕ್ಕೆ ಉರುಳಿತ್ತು ಎನ್ನಲಾಗಿದೆ. ದೇವರ ಇಷ್ಟದ ಪ್ರತಿಷ್ಠಾನ ಸ್ಥಳ ಇದೇ ಎಂದು ಅರಿತು ಅಲ್ಲಿಯೇ ಮೂರ್ತಿಯನ್ನು ಬಿಟ್ಟು ಬರಿ ಕೈಯಲ್ಲಿ ತೆರಳಿದ್ದರಂತೆ. ಅಂದಿನಿಂದ ಗ್ರಾಮದಲ್ಲಿ ಜಾತ್ರಾ ಕಾರ್ಯ ನಡೆಯುತ್ತದೆ. ಇದರ ಜತೆಗೆ ರಥೋತ್ಸವಕ್ಕೆ ತೇರನ್ನು ಸಿದ್ಧಗೊಳಿಸಲು ಗ್ರಾಮದ ಕೆಲ ಮನೆಗಳಿಂದ ದೊಡ್ಡ ದೊಡ್ಡ ಹೂವಿನ ಹಾರಗಳನ್ನು ಕಲಾ ತಂಡಗಳ ಮೆರವಣಿಗೆ ಮೂಲಕ ತೆಗೆದುಕೊಂಡು ಬಂದು ಸಿಂಗರಿಸುವುದು ಇಲ್ಲಿನ ವಿಶೇಷ.