ಅಡುಗೆ ಕೌಶಲಕ್ಕೆ ಬೇಕು ಪ್ರೋತ್ಸಾಹ

ಚಳ್ಳಕೆರೆ: ಮಹಿಳೆಯರ ಅಡುಗೆ ತಯಾರಿಸುವ ಕೌಶಲ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ನಾಗರಾಜ್ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ವೀರಶೈವ ಮಹಿಳಾ ಸಂಘ ಆಯೋಜಿಸಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದರು.

ಬದಲಾದ ಸಮಾಜದಲ್ಲಿ ಆಹಾರ ಸಂಸ್ಕೃತಿಯೂ ಬದಲಾಗುತ್ತಿದೆ. ಮನೆಯಲ್ಲಿ ತಯಾರಿಸುವ ಸಾಂಪ್ರದಾಯಕ ಅಡುಗೆ ವಿಧಾನಗಳು ಕಣ್ಮರೆಯಾಗುತ್ತಿವೆ. ಬೀದಿ ಬದಿಯ ನಾಜೂಕಿನ ಆಹಾರಗಳಿಗೆ ಜನ ಮಾರು ಹೋಗುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.

ರುಚಿಕರ ಆಹಾರ ಸಿದ್ಧಪಡಿಸುವ ಕೌಶಲ ಒಬ್ಬರಿಂದೊಬ್ಬರು ತಿಳಿದುಕೊಳ್ಳಲು ಆಹಾರ ಮೇಳ ಸಹಕಾರಿಯಾಗಿದೆ. ಕೆಲ ಆಹಾರ ತಯಾರಿಕೆಗೆ ಬೇಕಾಗುವ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವ ಇಚ್ಛೆ ಇದ್ದರೂ, ಕೆಲವರಿಗೆ ಸಂಕೋಚ ಇರುತ್ತದೆ. ಆಹಾರ ಮೇಳದಲ್ಲಿ ಮುಕ್ತವಾಗಿ ತಿಳಿದುಕೊಳ್ಳಲು ಅವಕಾಶವಿದೆ. ಆಹಾರ ಪದ್ಧತಿ ಶ್ರೇಷ್ಠತೆ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಮೇಳದಲ್ಲಿ ಭಾಗವಹಿಸಿದ್ದ ಮಹಿಳೆಯರು ದೋಸೆ, ಸೂಪ್, ಚಟ್ನಿ, ಗಾರ್ಗೆ, ರೊಟ್ಟಿ, ಲೆಮೆನ್ ಟೀ, ಚಟ್ನಿ ಪುಡಿ ಮತ್ತಿತರ ಆಹಾರಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ ವ್ಯಾಪಾರ ಮಾಡಿದರು.

ನಗರಸಭೆ ಸದಸ್ಯರಾದ ಸಾವಿತ್ರಮ್ಮ, ವಿಶುಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಎಚ್. ಗಂಗಣ್ಣ, ಉಪಾಧ್ಯಕ್ಷ ಕೆ.ಎಂ. ಜಗದೀಶ್, ಡಾ.ಕೆ.ಎಂ. ಜಯಕುಮಾರ್, ಮುಖಂಡರಾದ ರೇವಣ್ಣ, ವೃಷಭೇಂದ್ರಪ್ಪ, ಗುರುಸಿದ್ದಮೂರ್ತಿ, ರಾಜಣ್ಣ, ಬಸವರಾಜ್, ವಂದನರಾಜು, ಶಿವಕುಮಾರ್ ಇತರರಿದ್ದರು.