ದೇಶಕ್ಕಾಗಿ ನಮೋಗೆ ಮತ್ತೆ ಅಧಿಕಾರ

ಚಳ್ಳಕೆರೆ: ದೇಶದ ಅಭಿವೃದ್ಧಿ ಜತೆಗೆ ರಕ್ಷಣೆ ಬಗ್ಗೆ ಚಿಂತನೆ ಮಾಡಿರುವ ಜನತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಅಧಿಕಾರ ನೀಡಿದ್ದಾರೆ ಎಂದು ಸಂಸದ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲದಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಪಾಕಿಸ್ತಾನ, ಚೀನಾ ಇನ್ನಿತರ ಬಲಿಷ್ಠ ರಾಷ್ರಗಳಿಂದ ದೇಶವನ್ನು ರಕ್ಷಿಸುವ ಎದೆಗಾರಿಕೆ ಮೋದಿಗಿದೆ. ಹೀಗಾಗಿಯೇ ಜನ ಮತ್ತೊಮ್ಮೆ ಅವರಿಗೆ ಅಧಿಕಾರ ನೀಡಿದ್ದಾರೆ. 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಿ ಪ್ರಧಾನಿ ಕೈ ಬಲಪಡಿಸಿದ್ದಾರೆ ಎಂದರು.

ಎಂಪಿ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಪ್ರಧಾನಿ ಹುದ್ದೆಯ ಗೌರವ ಅರಿಯದೆ ಅಗೌರವದಿಂದ ಹೇಳಿಕೆ ನೀಡಿದರು. ಹೀಗಾಗಿ ರಾಜ್ಯದ 28 ಸ್ಥಾನಗಳಲ್ಲಿ ಕಾಂಗ್ರೆಸ್ ಒಂದನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಬರಿ ಅಭಿವೃದ್ಧಿ ಮಂತ್ರ ಪಡಿಸಿದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ 25 ಸ್ಥಾನಗಳಲ್ಲಿ ವಿಜಯಿ ಆಯಿತು ಎಂದು ವಿಶ್ಲೇಷಿಸಿದರು.

ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ. 35 ಮೀಟರ್ ನಾಲೆ ಕಾಮಗಾರಿ ಆರು ತಿಂಗಳಾದರೂ ಪೂರ್ಣವಾಗಿಲ್ಲ. ಈ ಬಗ್ಗೆ ನಿಗಾ ವಹಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ಎಂಪಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಗೆಲುವು ಸಾಧಿಸಿದೆ. ಚಳ್ಳಕೆರೆ ತಾಲೂಕಿನಲ್ಲಿ ಕಾಂಗ್ರೆಸ್ ಎಂಎಲ್‌ಎಯಿಂದ ಪಕ್ಷಕ್ಕೆ ಹಿನ್ನೆಡೆ ಆಗುತ್ತದೆ ಎಂಬ ವದಂತಿ ಇತ್ತು. ಆದರೆ, ಕಾರ್ಯಕರ್ತರ ಶ್ರಮದಿಂದ ಪಕ್ಷಕ್ಕೆ ಹೆಚ್ಚಿನ ಮತ ಬಿದ್ದಿವೆ ಎಂದರು.

ಮಂಡಲ್ ಅಧ್ಯಕ್ಷ ಬಿ.ವಿ.ಸಿರಿಯಣ್ಣ, ನಗರಸಭೆ ಸದಸ್ಯರಾದ ಎಸ್.ಜಯಣ್ಣ, ವೆಂಕಟೇಶ್, ಪಾಲಮ್ಮ, ತಾಪಂ ಸದಸ್ಯರಾದ ಸಣ್ಣಸೂರಯ್ಯ, ನವೀನ್, ಮುಖಂಡರಾದ ಸೋಮಶೇಖರ್ ಮಂಡಿಮಠ್, ಜಿ.ಪಿ.ಜಯಪಾಲಯ್ಯ, ಬೋರನಾಯಕ ಮತ್ತಿತರರಿದ್ದರು.
ಸಂತಾಪ: ಸಭೆ ಆರಂಭಕ್ಕೂ ಮುನ್ನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

Leave a Reply

Your email address will not be published. Required fields are marked *