ಗಾಳಿ, ಮಳೆಗೆ ಬೆಳೆ ಹಾನಿ

ಚಳ್ಳಕೆರೆ: ತಾಲೂಕಿನಲ್ಲಿ ಎರಡು ದಿನಗಳಿಂದ ಆರಂಭವಾಗಿರುವ ಮಳೆಗೆ ನನ್ನಿವಾಳ ಗ್ರಾಮದಲ್ಲಿ ನಿರ್ಮಿಸಿದ್ದ ಪಾಲಿಹೌಸ್, ಇಟ್ಟಿಗೆ ಬಟ್ಟಿಗಳ ಶೆಡ್ ನೆಲಕಚ್ಚಿದ್ದು ಲಕ್ಷಾಂತರ ರೂ. ನಷ್ಟವಾಗಿದೆ.

ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ನನ್ನಿವಾಳದ ರೈತ ಟಿ.ಮಧು ಅವರ ಜಮೀನಿನಲ್ಲಿ ನಿರ್ಮಿಸಿದ್ದ ಪಾಲಿಹೌಸ್ ಹಾಗೂ ಪಕ್ಕದ ಇಟ್ಟಿಗೆ ಬಟ್ಟಿಯಲ್ಲಿದ್ದ ಶೆಡ್‌ಗಳು ನೆಲಕ್ಕುರುಳಿವೆ.

ಪಾಲಿಹೌಸ್‌ನಲ್ಲಿ ಕಾರ್ನೇಷನ್ ಹೂ ಬೆಳೆಯಲು ಅಂದಾಜು 20 ಲಕ್ಷ ರೂ. ವೆಚ್ಚ ಮಾಡಿದ್ದರು. ಕಟಾವಿಗೆ ಬಂದಿದ್ದ ಬೆಳೆ ಮೇಲೆ ಪಾಲಿಹೌಸ್ ಉರುಳಿದ್ದು, ಕೈಗೆ ಬಂದ ಫಸಲು ಮಣ್ಣುಪಾಲಾಗಿದೆ.

ಅಧಿಕ ಮಳೆ ಸುರಿಯ ಲಕ್ಷಣದ ಮೋಡಗಳಿದ್ದರೂ, ಭಾರಿ ಗಾಳಿಯಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಬಿರುಗಾಳಿಗೆ ತಾಲೂಕಿನ ಜಡೇಕುಂಟೆ, ಹುಲಿಕುಂಟೆ ಗ್ರಾಮದ ಬಾಳೆ, ಪಪ್ಪಾಯಿ ನೆಲಕಚ್ಚಿವೆ.

ಒಂದು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಯಂತೆ ಕೊಟ್ಟಿಗೆ ಗೊಬ್ಬರ ಬಳಸಿ ಉಳಿಮೆ ಮಾಡಿದ್ದೆ. ಬೆಂಗಳೂರಿನಿಂದ 80 ಸಾವಿರ ಸಸಿ ತಂದು ಕಳೆದ ವರ್ಷ ಜುಲೈ ತಿಂಗಳಲ್ಲಿ ನಾಟಿ ಮಾಡಿದ್ದೇವು. ಈವರೆಗೆ 50 ಲಕ್ಷ ರೂ. ವೆಚ್ಚ ಮಾಡಿದ್ದೇವೆ. ಫಸಲಿಗೆ ಬಂದ ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ನನ್ನಿವಾಳ ರೈತ ಟಿ.ಮಧು ತಿಳಿಸಿದ್ದಾರೆ.

ಗಾಳಿ ರಭಸಕ್ಕೆ ಪಾಲಿಹೌಸ್ ಬಿದ್ದು, ಕಟಾವಿಗೆ ಬಂದ ಹೂಗಳು ನಾಶವಾಗಿದ್ದು, ಅಂದಾಜು 40-50 ಲಕ್ಷ ರೂ. ನಷ್ಟವಾಗಿದೆ. ಈ ಕುರಿತು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ವಿರೂಪಾಕ್ಷಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *