ಕೇಂದ್ರದ ಜನಪರ ಯೋಜನೆ ಜಯಕ್ಕೆ ಕಾರಣ

ಚಳ್ಳಕೆರೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಬಿಜೆಪಿಯ ಅಭೂತಪೂರ್ವ ಜಯಕ್ಕೆ ಕಾರಣವಾಗಿದೆ ಎಂದು ತಾಲೂಕು ಮಂಡಲ ಅಧ್ಯಕ್ಷ ಬಿ.ವಿ. ಸಿರಿಯಣ್ಣ ತಿಳಿಸಿದರು.

ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇಶದ ಏಕತೆ, ಸಮಗ್ರತೆ, ಸಂರಕ್ಷಣೆಗೆ ಮೋದಿ ನಾಯಕತ್ವದ ಅಗತ್ಯ ಎಂಬುದು ಜನರಿಗೆ ಅರ್ಥವಾಗಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಾಮರ್ಥ್ಯ ಅವರಿಗಿದೆ ಎಂದರು.

ಮುಖಂಡ ಪಿ. ಬೋರನಾಯಕ ಮಾತನಾಡಿ, ದೇಶದಲ್ಲಿ ಮೋದಿ ಪರ ಅಭಿಮಾನ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಬಿಜೆಪಿಗೆ ದೊರೆತ ಗೆಲುವು ಐತಿಹಾಸಿಕ ದಾಖಲೆಯಾಗಿದೆ. ತಾಲೂಕಿನಲ್ಲಿ ಯಾವುದೇ ಅಧಿಕಾರವಿಲ್ಲದಿದ್ದರೂ, ಕಾರ್ಯಕರ್ತರ ಪರಿಶ್ರಮದಿಂದ ನಿರೀಕ್ಷಿಸಿದಷ್ಟು ಮತ ಪಡೆದಿದ್ದೇವೆ ಎಂದರು.

ಮುಖಂಡ ಎಂ.ಎಸ್. ಜಯರಾಂ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷ. ತಾಲೂಕಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಇಂದಿನಿಂದಲೇ ಪ್ರತಿ ಗ್ರಾಮ ಮಟ್ಟದಲ್ಲಿ ಸಂಘಟನೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

ನಗರಸಭಾ ಸದಸ್ಯರಾದ ಎಸ್. ಜಯಣ್ಣ, ವೆಂಕಟೇಶ್, ಮುಖಂಡರಾದ ಕರೀಕೆರೆ ತಿಪ್ಪೇಸ್ವಾಮಿ, ಹಟ್ಟಿ ರುದ್ರಪ್ಪ, ದಿನೇಶ್ ರೆಡ್ಡಿ, ಇ.ಎನ್. ವೆಂಕಟೇಶ್, ಯಲ್ಲಪ್ಪ, ಹನುಮಂತರೆಡ್ಡಿ, ಎಚ್. ಗುರುಮೂರ್ತಿ, ದ್ಯಾವರನಹಳ್ಳಿ ಸುರೇಶ್ ಇತರರಿದ್ದರು.

Leave a Reply

Your email address will not be published. Required fields are marked *