ಸ್ವಚ್ಛತೆಗೆ ಮನೆ ಮನೆಗೆ ಬಕೆಟ್

ಚಳ್ಳಕೆರೆ: ನಗರ ವ್ಯಾಪ್ತಿ ಮನೆಗಳಿಗೆ ಪ್ಲಾಸ್ಟಿಕ್ ಕಸದ ಬಕೆಟ್‌ಗಳನ್ನು ವಿತರಿಸುವ ಮೂಲಕ ನಗರಸಭೆ ಆಡಳಿತ ಸ್ವಚ್ಛತೆಗೆ ವಿನೂತನ ಪ್ರಯೋಗ ಕೈಗೊಂಡಿದೆ.

ಹಸಿ ಮತ್ತು ಒಣ ಕಸ ವಿಲೆವಾರಿಗೆ ಅನುಕೂಲವಾಗಲು ಪ್ರತಿ ಮನೆಗಳಿಗೆ ಹಸಿರು, ನೀಲಿ ಬಣ್ಣದ ಪ್ಲಾಸ್ಟಿಕ್ ಬಕೆಟ್‌ಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ.

ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ ಮಾತನಾಡಿ, ಕಸ ಸಂಗ್ರಹಣೆ ವಾಹನಗಳು ಪ್ರತಿ ಬೀದಿಗಳಲ್ಲೂ ಜಾಗೃತಿ ಮೂಡಿಸಿದರೂ, ರಸ್ತೆ ಹಾಗೂ ಚರಂಡಿಗೆ ಕಸ ಹಾಕುವುದು ತಪ್ಪುತ್ತಿಲ್ಲ. ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದರು.

2011ರ ಜನಗಣತಿ ಪ್ರಕಾರ ನಗರ ವ್ಯಾಪ್ತಿಯಲ್ಲಿ 12,500 ಕುಟುಂಬಗಳಿವೆ. ಎಸ್‌ಎಫ್‌ಸಿ ಮತ್ತು ಬಿಆರ್‌ಜಿಎಫ್ ಅನುದಾನದಲ್ಲಿ 12,000 ಬಕೆಟ್ ಖರೀದಿಸಲಾಗಿದ್ದು, ಹಸಿ, ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಲು ಕುಟುಂಬಕ್ಕೆ ಹಸಿರು, ನೀಲಿ ಬಣ್ಣ ಎರಡು ಬಕೆಟ್ ವಿತರಿಸಲಾಗುತ್ತಿದೆ.

ಮನೆ ಕಸವನ್ನು ಇದರಲ್ಲಿ ಸಂಗ್ರಹಿಸುವ ಮೂಲಕ ರಸ್ತೆಯಲ್ಲಿ ಕಸ ಚೆಲ್ಲುವ ರೂಢಿ ನಿಲ್ಲಿಸಿಬೇಕು. ಸಂಗ್ರಹಗೊಂಡ ಕಸವನ್ನು ಕಸ ಸಂಗ್ರಹಣೆ ವಾಹನಕ್ಕೆ ನೀಡಬೇಕು. ಅವರು ಅದನ್ನು ತ್ಯಾಜ್ಯ ವಿಲೆವಾರಿ ಘಟಕಕ್ಕೆ ತಲುಪಿಸುತ್ತಾರೆ. ನಗರ ಸ್ವಚ್ಛವಾಗಿಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.