ಚಳ್ಳಕೆರೆ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಸಮಸ್ಯೆಗಳಿಗೆ ಸಂದಿಸುವ ಮನೋಭಾವ ನೌಕರರು ಬೆಳೆಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.
ನಗರದಲ್ಲಿ ಈಚೆಗೆ ಆಯೋಜಿಸಿದ್ದ ಸುಕೋ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಭದ್ರತೆ ಇಲ್ಲ ಎಂಬ ಮನೋಭಾವ ಸುಳ್ಳು ಮಾಡಲಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ರಾಜ್ಯದಲ್ಲಿ ಸದೃಢವಾಗಿ ಬೆಳೆದಿದೆ ಎಂದರು.
ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಸತೀಶ್ಬಾಬು ಮಾತನಾಡಿ, ಗ್ರಾಹಕರ ಮತ್ತು ಷೇರುದಾರರ ನಂಬಿಕೆ ಕಾಪಾಡಿಕೊಂಡು ಜನಪರವಾಗಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಂತೆ ಜೀವ ವಿಮೆ, ಆರೋಗ್ಯ ವಿಮೆ ಸೇರಿ ಹಲವು ಸೌಲಭ್ಯ ನೀಡುತ್ತಿರುವುದು ಮಾದರಿ ಎಂದು ಶ್ಲಾಘಿಸಿದರು.
ಬ್ಯಾಂಕ್ ವ್ಯವಸ್ಥಾಪಕ ಮೋಹಿತ್ ಮಸ್ಕಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ 25 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿದ್ದೇವೆ. 16 ಜಿಲ್ಲೆಯಲ್ಲಿ 28 ಶಾಖೆ ವಿಸ್ತರಿಸಿದ್ದೇವೆ. ಮಾರ್ಚ್ ಅಂತ್ಯಕ್ಕೆ 1,122 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶಾಖಾ ವ್ಯವಸ್ಥಾಪಕ ಜ್ಯೋತಿ ಕಂಪ್ಲಿ, ನಿರ್ದೇಶಕರಾದ ಪರಿಮಳಾಚಾರ್, ಮಾತೃಶ್ರೀ ಮಂಜುನಾಥ್ ಇತರರಿದ್ದರು.