ಗೆರ್ಬಹ: ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (17ಕ್ಕೆ 5) ಮಾರಕ ಸ್ಪಿನ್ ದಾಳಿಯ ಹೊರತಾಗಿಯೂ ಭಾರತ ತಂಡ, ಆತಿಥೇಯ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಯುವ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ (47* ರನ್, 41 ಎಸೆತ, 7 ಬೌಂಡರಿ) ಹಾಗೂ ಗೆರಾಲ್ಡ್ ಕೋಟ್‌ಜೀ (19*) ಸಾಹಸದ ನೆರವಿನಿಂದ ಹರಿಣಗಳ ಪಡೆ ರೋಚಕ ಜಯ ಸಾಧಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ
ಸೇಂಟ್ ಜಾರ್ಜ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವೈಲ್ಯ ಕಂಡರು. ಆಗ ಆಸರೆಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (39* ರನ್, 45 ಎಸೆತ, 4 ಬೌಂಡರಿ, 1 ಸಿಕ್ಸರ್) ಹೋರಾಟದಿಂದ 6 ವಿಕೆಟ್‌ಗೆ 124 ರನ್‌ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ವರುಣ್ ಚಕ್ರವರ್ತಿ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ 89 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಟ್ರಿಸ್ಟಾನ್ ಸ್ಟಬ್ಸ್- ಕೋಟ್‌ಜೀ ನಡೆಸಿದ ಜತೆಯಾಟದ ನೆರವಿನಿಂದ 19 ಓವರ್‌ಗಳಲ್ಲಿ 7 ವಿಕೆಟ್‌ಗೆ 128 ರನ್‌ಗಳಿಸಿ ಗೆಲುವು ಒಲಿಸಿಕೊಂಡಿತು.
ಚಕ್ರವರ್ತಿ ಸ್ಪಿನ್ ಪಂಚ್: ಸಾಧಾರಣ ಮೊತ್ತದ ಚೇಸಿಂಗ್‌ಗೆ ಇಳಿದ ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ (24) ಹಾಗೂ ರ‌್ಯಾನ್ ರಿಕೆಲ್‌ಟನ್ (13) ಮೊದಲ ವಿಕೆಟ್‌ಗೆ 17 ಎಸೆತಗಳಲ್ಲಿ 22 ರನ್ ಕಸಿದರು. ಆದರೆ 3ನೇ ಓವರ್‌ನಲ್ಲಿ ರಿಕೆಲ್‌ಟನ್ ವಿಕೆಟ್ ಪಡೆದ ಅರ್ಷದೀಪ್ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. 6ನೇ ಓವರ್‌ನಲ್ಲಿ ದಾಳಿಗಿಳಿದ ವರುಣ್ ಕೊನೇ ಎಸೆತದಲ್ಲಿ ಏಡನ್ ಮಾರ್ಕ್ರಮ್ (3), ಮರು ಓವರ್‌ನಲ್ಲಿ ಹೆಂಡ್ರಿಕ್ಸ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. 4ನೇ ವಿಕೆಟ್‌ಗೆ ಜತೆಯಾದ ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಮಾರ್ಕೋ ಜಾನ್ಸೆನ್ (7) ಚೇಸಿಂಗ್‌ಗೆ ಬಲ ತುಂಬಿದರು. ಆದರೆ ಚಕ್ರವರ್ತಿ ದಾಳಿಗೆ ಹರಿಣಗಳ ಮಧ್ಯಮ ಕ್ರಮಾಂಕ ತತ್ತರಿಸಿತು. ಹೆನ್ರಿಕ್ ಕ್ಲಾಸೆನ್ (2), ಡೇವಿಡ್ ಮಿಲ್ಲರ್(0) ಒಂದೇ ಓವರ್‌ನಲ್ಲಿ ಡಗೌಟ್ ಸೇರಿದರು. ಇದರೊಂದಿಗೆ 66 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ಅಫ್ರಿಕಾ ಚೇಸಿಂಗ್‌ನಲ್ಲಿ ಲಯ ತಪ್ಪಿತು. ಆಗ ಟ್ರಿಸ್ಟಾನ್ ಸ್ಟಬ್ಸ್ ಜತೆಯಾದ ಗೆರಾಲ್ಡ್ ಕೋಟ್ ಜೀ ಮುರಿಯದ 8ನೇ ವಿಕೆಟ್‌ಗೆ 20 ಎಸೆತಗಳಲ್ಲಿ 40 ರನ್‌ಗಳಿಸಿ ಭಾರತದ ಗೆಲುವು ಕಸಿದರು.