ಚೈತ್ರಾ ಕುಂದಾಪುರ ಸಹಿತ ಏಳು ಮಂದಿಗೆ ನ್ಯಾಯಾಂಗ ಬಂಧನ

ಸುಳ್ಯ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರ ಸಹಿತ ಏಳು ಮಂದಿಯನ್ನು ಪೊಲೀಸರು ಗುರುವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇವರೆಲ್ಲರಿಗೂ ನ್ಯಾಯಾಯಲಯ ನ.3ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

ಚೈತ್ರಾ ಕುಂದಾಪುರ(24), ಸುದೀನ್(29), ಹರೀಶ್(20), ಹರೀಶ್ ಖಾರ್ವಿ(23), ನಿಖಿಲ್(22), ವಿನಯ್(23), ಮಣಿಕಂಠ(24) ಬಂಧಿತರು. ಸುಬ್ರಹ್ಮಣ್ಯ ಪೊಲೀಸರು ಇವರನ್ನು ಮಂಗಳೂರು ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ.

ಘಟನೆ ಸಂಬಂಧ ಚೈತ್ರಾ ಕುಂದಾಪುರ ಕೂಡ ಪ್ರತಿದೂರು ನೀಡಿದ್ದಾರೆ. ಇತ್ತ ಗಾಯಗೊಂಡ ಗುರುಪ್ರಸಾದ್ ಬುಧವಾರ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗುರುವಾರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ಖಂಡಿಸಿ ಸುಬ್ರಹ್ಮಣ್ಯ ಬಂದ್: ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಮೇಲೆ ಹಿಂದು ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಆಕೆಯ ಬೆಂಬಲಿಗರು ಬುಧವಾರ ರಾತ್ರಿ ನಡೆಸಿದ ಹಲ್ಲೆ ಮತ್ತು ದೇವಸ್ಥಾನಕ್ಕೆ ಧಕ್ಕೆ ತರುವ ರೀತಿಯ ನಡವಳಿಕೆ ಖಂಡಿಸಿ ಕುಕ್ಕೆ ಸುಬ್ರಹ್ಮಣ್ಯ ನಗರದ ವರ್ತಕರು ಗುರುವಾರ ಬಂದ್ ನಡೆಸಿದರು.

ಬೆಳಗ್ಗಿನಿಂದ ಸಾಯಂಕಾಲ ತನಕ ಕುಕ್ಕೆಯಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಭಕ್ತರಿಗೆ ತೊಂದರೆಯಾಗದಂತೆ ದೇವಸ್ಥಾನ ವತಿಯಿಂದ ಭಕ್ತರಿಗೆ ಉಪಹಾರ, ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಹಲ್ಲೆ ಖಂಡಿಸಿ ನಗರದ ವರ್ತಕರು ಅಂಗಡಿಮುಂಗಟ್ಟು ಬಂದ್ ಮಾಡಿ ದೇವಸ್ಥಾನದ ಆದಿಶೇಷ ವಸತಿಗೃಹ ಬಳಿಯಿಂದ ರಥಬೀದಿ ಮೂಲಕ ಕುಮಾರಧಾರ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಚೈತ್ರಾ ಕುಂದಾಪುರ ಹಾಗೂ ಆಕೆಯ ಬೆಂಬಲಿಗರ ವಿರುದ್ಧ ಘೋಷಣೆ ಕೂಗಿದರು.
ವಸತಿಗೃಹ ಬಳಿ ನಡೆದ ಸಭೆಯಲ್ಲಿ ಸ್ಥಳೀಯ ಮುಖಂಡ ರಾಜೇಶ್ ಎನ್.ಎಸ್. ಮಾತನಾಡಿ, ಚೈತ್ರಾ ಕುಂದಾಪುರ ಹಾಗೂ ಆಕೆಯ ಬೆಂಬಲಿಗರ ಗೂಂಡಾ ವರ್ತನೆ ಸಹಿಸಲು ಅಸಾಧ್ಯ. ಧಾರ್ಮಿಕ ಕ್ಷೇತ್ರಕ್ಕೆ ಬಂದು ಠಾಣೆಯ ಕೂಗಳತೆ ದೂರದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸುತ್ತೇವೆ. ಇಂಥ ಕೃತ್ಯ ಯಾರು ನಡೆಸಿದರೂ ಪಕ್ಷ ಭೇದ ಮರೆತು ವಿರೋಧಿಸುತ್ತೇವೆ ಎಂದರು.

ನಗರದ ವರ್ತಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಕಡಬ, ಗುತ್ತಿಗಾರು, ಹರಿಹರ, ಕೊಲ್ಲಮೊಗ್ರು, ಐನಕಿದು, ಪಂಜ, ಬಳ್ಪಗ್ರಾಮಗಳ ಸಾರ್ವಜನಿಕರು ಪಾಲ್ಗೊಂಡಿದ್ದರು. ಆಟೋಚಾಲಕ ಸಂಘ, ಟ್ಯಾಕ್ಸಿ ಚಾಲಕ ಸಂಘ ಬಂದ್‌ಗೆ ಸಹಕರಿಸಿದ್ದವು.

ಸ್ವಾಮೀಜಿ ವಿರುದ್ಧವಲ್ಲ: ಹೋರಾಟ-ಬಂದ್ ಸುಬ್ರಹ್ಮಣ್ಯ ನರಸಿಂಹ ಮಠದ ಸ್ವಾಮೀಜಿ ವಿರುದ್ಧವಲ್ಲ. ಹಲ್ಲೆಯಂಥ ಅಮಾನವೀಯ ಕೃತ್ಯವೆಸಗಿದ ಚೈತ್ರಾ ಕುಂದಾಪುರ ಹಾಗೂ ಆಕೆಯ ಬೆಂಬಲಿಗರ ಮತ್ತು ಆಕೆಗೆ ಸಹಕಾರ ನೀಡುತ್ತಿರುವವರ ವಿರುದ್ಧ ಎಂದು ಮುಖಂಡರಾದ ಶಿವರಾಮ ರೈ ಹೇಳಿದರು.

ಹಿಂದು ನಾಯಕಿಯಾಗಲು ಅರ್ಹಳಲ್ಲ: ಕುಕ್ಕೆ ಕ್ಷೇತ್ರದ ಬಗ್ಗೆ ಮಾಹಿತಿಯಿಲ್ಲದೆ ತೀರಾ ಕೆಳಮಟ್ಟದ ಭಾಷೆಯಲ್ಲಿ ಮಾತನಾಡಿರುವ ಚೈತ್ರಾ ಕುಂದಾಪುರ ಹಿಂದು ನಾಯಕಿ ಎನ್ನಿಸಿಕೊಳ್ಳಲು ಅರ್ಹತೆ ಪಡೆದಿಲ್ಲ ಎಂದು ಧರ್ಮಪ್ರಚಾರಕ ಲಕ್ಷ್ಮೀಶ ಗಬಲಡ್ಕ ಹೇಳಿದರು.
ಬಂದ್ ಕರೆಗೆ ಸಹಕರಿಸಿದವರಿಗೆ ನಡೆದ ಅಭಿನಂದನೆ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದು ನಾಯಕ ಎನಿಸಿಕೊಂಡವರು ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿತ್ತು. ಆದರೆ ಚೈತ್ರಾ ಹಿಂದುಗಳನ್ನು ವಿಂಗಡಿಸುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಕಿಶೋರ್ ಶಿರಾಡಿ ಹೇಳಿದರು.

ತಾಪಂ ಸದಸ್ಯ ಅಶೋಕ್ ನೆಕ್ರಾಜೆ, ಪ್ರಮುಖರಾದ ಸತೀಶ್ ಕೂಜುಗೋಡು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಪ್ರಮುಖರಾದ ರಾಜೇಶ್ ಎನ್.ಎಸ್, ಹರಿಣಾಕ್ಷಿ, ಲಕ್ಷ್ಮಿ, ಮಹೇಶ್ ಕುಮಾರ್ ಕರಿಕ್ಕಳ, ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್, ಮಾಧವ ಡಿ, ಮೋನಪ್ಪ ಮಾನಾಡು, ಪ್ರಶಾಂತ್ ಭಟ್ ಮಾಣಿಲ, ರವೀಂದ್ರ ಕುಮಾರ್ ರುದ್ರಪಾದ, ಹರೀಶ್ ಇಂಜಾಡಿ, ಲೋಲಾಕ್ಷ ಕೈಕಂಬ, ಮಂಜುನಾಥ ರಾವ್, ಶಿವಕುಮಾರ್ ಕಾಮತ್, ಶಿವರಾಮ ರೈ ಮತ್ತಿತರರಿದ್ದರು.

ಫೇಸ್‌ಬುಕ್ ಪುಟದಲ್ಲಿ ಅವಹೇಳನಕಾರಿ ಪೋಸ್ಟ್: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರ ನಡುವೆ ಜಟಾಪಟಿ ಸಂಬಂಧಿಸಿ ಫೇಸ್‌ಬುಕ್‌ನ ‘ಮಂಗಳೂರು ಮುಸ್ಲಿಂ ಪೇಜ್’ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆ.

ಇಬ್ಬರು ಕೂಡ ಕೋಮು ಸಂಘಟನೆಗೆ ಸೇರಿದವರಾಗಿದ್ದಾರೆ. ದೇವಸ್ಥಾನದ ಆಸ್ತಿ ವಿಚಾರದಲ್ಲಿ ಅಧಿಕ ಪ್ರಸಂಗ ಮಾಡಿದ ಚೈತ್ರಾಳಿಗೆ ಬಿದ್ದ ಒದೆ ನೋಡಿ ಸಂತೋಷವಾಗಿದೆ. ಇದರಿಂದ ಕೆರಳಿದ ಆಕೆಯ ಸಂಗಡಿಗರು ಮಾರಕಾಯುಧದಿಂದ ಇನ್ನೊಂದು ಸಂಘಟನೆ ಮೇಲೆ ದಾಳಿ ಮಾಡಿದ್ದಾರೆ. ಚೈತ್ರಾ ಕುಂದಾಪುರ ಬೀದಿ ಹೆಣ ಆಗುವ ತನಕ ಇದು ಮುಂದುವರಿಯಲಿ ಎಂದು ಅಲ್ಲಾಹ್‌ನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಪುಟದ ಅಡ್ಮಿನ್ ಬರೆದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಈ ಕಾಮೆಂಟ್‌ನ್ನು ಪೋಸ್ಟ್ ಮಾಡಿ, ಹಿಂದು ಸಂಘಟನೆಗಳ ಒಡಕಿನ ಲಾಭವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸುಬ್ರಹ್ಮಣ್ಯ ಘಟನೆ ಬಗ್ಗೆ ಹಿಂದು ಸಂಘಟನೆಗಳು, ಕಾರ್ಯಕರ್ತರು ಪರಸ್ಪರ ದೋಷಾರೋಪಣೆ ಮಾಡಿಕೊಳ್ಳಬಾರದು ಎಂಬ ಸಂದೇಶವನ್ನು ಜಾಲತಾಣಗಳಲ್ಲಿ ಹಾಕಲಾಗಿದೆ.