ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲು

ಮಂಗಳೂರು: ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಮೇಲೆ ಸುಬ್ರಹ್ಮಣ್ಯದಲ್ಲಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಹಿಂದು ಸಂಘಟನೆ ಯುವ ನಾಯಕಿ ಚೈತ್ರಾ ಕುಂದಾಪುರ ಅವರನ್ನು ಶುಕ್ರವಾರ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ.

ಜ್ವರ ಕಾಣಿಸಿಕೊಂಡ ಕಾರಣ ಕಾರಾಗೃಹದ ವೈದ್ಯಕೀಯ ಮಾರ್ಗದರ್ಶಕ ವೈದ್ಯರು ನೀಡಿದ ಸಲಹೆಯಂತೆ ವೆನ್ಲಾಕ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದ್ದು, ವೈದ್ಯರ ಸಲಹೆಯಂತೆ ಅಲ್ಲೇ ದಾಖಲಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಪೂರ್ವನಿಯೋಜಿತ ಕೃತ್ಯ ಆರೋಪ: ಈ ನಡುವೆ ಹಲ್ಲೆ ಪ್ರಕರಣ ಬಳಿಕ ವಾಹನವೊಂದರಲ್ಲಿ ಕುಳಿತುಕೊಂಡು ಚೈತ್ರಾ ಕುಂದಾಪುರ ಮಾತನಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ.

‘ಇದೊಂದು ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಡೆಸಿದ ಪೂರ್ವನಿಯೋಜಿತ ಕೃತ್ಯ. ನಾವು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ವಾಪಾಸ್ ಬರುವ ಸಂದರ್ಭ ವಾಹನ ಅಡ್ಡಗಟ್ಟಿ ಗುರುಪ್ರಸಾದ್‌ತಂಡ ಹಲ್ಲೆ ನಡೆಸಿದೆ. ನಾನು ಆತ್ಮರಕ್ಷಣೆಗಾಗಿ ಕೇವಲ ಅವರನ್ನು ದೂಡಿದ್ದೇನೆ. ಹಲ್ಲೆ ನಡೆಸುವ ಉದ್ದೇಶವಿರುತ್ತಿದ್ದರೆ, ರೌಡಿಶೀಟರ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲು ಹುಡುಗರನ್ನು ಕರೆತರುತ್ತಿರಲಿಲ್ಲ ಎಂದವರು ಸುಮಾರು 2.40 ನಿಮಿಷದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನಾನು ಮಠದ ಪರವಾಗಿ ಮಾತನಾಡಲು ಬಂದ ಸಂದರ್ಭವನ್ನು ಹಲ್ಲೆಗೆ ಬಳಸಿಕೊಂಡಿದ್ದಾರೆ. ಮಾತ್ರವಲ್ಲ ಮುಸ್ಲಿಮರ ಜತೆ ಸಂಬಂಧ ಕಲ್ಪಿಸಿ ಅವಾಚ್ಯವಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ. ಅವರ ಮನೆಯ ಹೆಣ್ಮಕ್ಕಳ ಬಗ್ಗೆ ಈ ರೀತಿಯಾಗಿ ಮಾತನಾಡಿದರೆ ಸುಮ್ಮನಿರುತ್ತಾರಾ? ಗುರುಪ್ರಸಾದ್ ಪಂಜ, ತೀರ್ಥರಾಮ, ಆಶಿತ್ ಕಲ್ಲಾಜೆ ಅವರ ಫೇಸ್‌ಬುಕ್ ಪುಟವನ್ನು ಪರಿಶೀಲಿಸಿದರೆ ಅವರು ಹಾಕಿರುವ ಕಾಮೆಂಟ್‌ಗಳನ್ನು ನೋಡಬಹುದು. ಆಶಿತ್ ಕಲ್ಲಾಜೆ ನನಗೆ ಫೋನ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಈ ವೀಡಿಯೋ ಮಾತನ್ನು ಎಲ್ಲಿ ಹೇಳಿದರು ಎನ್ನುವುದು ಸ್ಪಷ್ಟವಾಗಿಲ್ಲ. ಜೀಪೊಂದರಲ್ಲಿ ಕುಳಿತುಕೊಂಡು ಚೈತ್ರಾ ಕುಂದಾಪುರ ಈ ಮಾತು ಹೇಳಿರುವುದು ದಾಖಲಾಗಿದ್ದು, ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾರಾಗೃಹದಿಂದಲೇ ಅಪ್‌ಲೋಡ್?: ನ್ಯಾಯಾಂಗ ಬಂಧನದಲ್ಲಿರುವ ಚೈತ್ರಾ ಕುಂದಾಪುರ ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಿಂದಲೇ ಫೇಸ್‌ಬುಕ್ ಪೇಜ್ ಅಪ್ಲೋಡ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬುಧವಾರ ಚೈತ್ರಾ ಅವರನ್ನು ಬಂಧಿಸಲಾಗಿದ್ದರೂ ಅವರ ೇಸ್‌ಬುಕ್ ಪೇಜ್ ಮಾತ್ರ ಗುರುವಾರ ರಾತ್ರಿವರೆಗೆ ಅಪ್ಲೋಡ್ ಆಗುತ್ತಲೇ ಇತ್ತು. ಜೈಲಿನೊಳಗೆ ಮೊಬೈಲ್ ಬಳಕೆ ಮಾಡಲು ಅವಕಾಶ ದೊರೆತಿತ್ತೇ? ಅಥವಾ ಅವರ ಹೆಸರಿನಲ್ಲಿ ಬೇರೆ ವ್ಯಕ್ತಿಗಳು ಅವರ ಫೇಸ್‌ಬುಕ್ ಖಾತೆ ಬಳಸುತ್ತಿದ್ದರೇ? ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರತೊಡಗಿವೆ.