ಮೆಲ್ಬೋರ್ನ್​ ಏಕದಿನ ಪಂದ್ಯ: ಚಹಾಲ್​ಗೆ 6 ವಿಕೆಟ್, 230ಕ್ಕೆ ಆಸ್ಟ್ರೇಲಿಯಾ ಆಲ್​ ಔಟ್​

ಮೆಲ್ಬೋರ್ನ್​: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಪರ ಬೌಲರ್​ ಯಜುವೇಂದ್ರ ಚಾಹಲ್​ ಅವರು ಅದ್ಭುತ ಪ್ರದರ್ಶನ ನೀಡಿ 6 ವಿಕೆಟ್​ ಗಳಿಸಿದ್ದು, ಆಸ್ಟ್ರೇಲಿಯಾ 230 ರನ್​​ಗಳಿಗೆ ಆಲ್​ಔಟ್ ಆಗುವ ಮೂಲಕ ಭಾರತಕ್ಕೆ 231 ರನ್​ಗಳ ಸುಲಭ ಗೆಲುವಿನ ಗುರಿ ನೀಡಿದೆ.

ಮೆಲ್ಬೋರ್ನ್​​​ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಸರಣಿಯ ಕೊನೆ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಆಸೀಸ್​ ಪಡೆಗೆ ಟೀಂ ಇಂಡಿಯಾ ಬೌಲರ್​ ಯಜುವೇಂದರ್​ ಚಹಲ್​ ಮಾರಕವಾದರು. ಭಾರತದ ಬೌಲರ್​ಗಳಾದ ಭುವನೇಶ್ವರ್​ ಮತ್ತು ಮೊಹಮ್ಮದ್​ ಶಮಿ ತಲಾ 2 ವಿಕೆಟ್ ಕಬಳಿಸಿದರು. ಟೀಂ ಇಂಡಿಯಾ ಬೌಲರ್​ಗಳ ದಾಳಿ ಎದುರಿಸಲು ಪರದಾಡಿದ ಕಾಂಗರೂ ಪಡೆ 1.2 ಓವರ್​ ಬಾಕಿಯಿರುವಾಗಲೇ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಪೆವಿಲಿಯನ್​ನತ್ತ ಪರೇಡ್​​ ನಡೆಸಿತು.

ಪಂದ್ಯ ಮೊದಲಾರ್ಧದಲ್ಲಿ ಆಸ್ಟ್ರೇಲಿಯಾ ಪರ ಬ್ಯಾಟ್ಸ್​ಮನ್​ ಪೀಟರ್ ಹ್ಯಾಂಡ್​​ಸ್ಕೋಂಬ್ ಮಾತ್ರ 58 ರನ್​ಗಳನ್ನು ಪೇರಿಸಿ ಉತ್ತಮ ಪ್ರದರ್ಶನ ನೀಡುವಲ್ಲಿ ಉಶಸ್ವಿಯಾದರು. ಇವರನ್ನು ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್​ಮನ್​ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಆಸ್ಟ್ರೇಲಿಯಾ ಪರ ಬ್ಯಾಟಿಂಗ್​ ಮಾಡಲು ಕ್ರೀಸ್​ಗಿಳಿದ ಅಲೆಕ್ಸ್​ ಕ್ಯಾರೆ 5, ಆರನ್​ ಫಿಂಚ್​ 14, ಉಸ್ಮಾನ್​ ಖವಾಜ 34 ಶಾನ್​ ಮಾರ್ಷ್​ 39, ಮಾರ್ಕಸ್​ ಸ್ಟೋನಿಸ್ 10 ಗ್ಲೆನ್​ ಮ್ಯಾಕ್ಸ್​ವೆಲ್​ 26, ರಿಚರ್ಡ್​ಸನ್​ 16, ಆ್ಯಡಂ ಝಂಪ್​ 8, ಪೀಟರ್​ ಸಿಡ್ಲೆ 10 ಮತ್ತು ಬಿಲ್ಲಿ ಸ್ಟ್ಯಾನ್​ಲೆಕ್​ ಶೂನ್ಯ ರನ್​ ಗಳಿಸಿ ಔಟಾದರು.

ಈಗಾಗಲೇ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಮ್ಯಾಚ್​ ಗೆದ್ದಿದ್ದು, ಕುತೂಹಲ ಮೂಡಿಸಿರುವ ಕೊನೆ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡಿ 231 ರನ್​ ಗಳಿಸಿದರೆ ಸರಣಿ ತಮ್ಮದಾಗಿಸಿಕೊಳ್ಳಲಿದ್ದಾರೆ.

42 ರನ್​ಗಳಿಗೆ 6 ವಿಕೆಟ್​ ಪಡೆಯುವ ಮೂಲಕ ಚಹಲ್​ ಅದ್ಭುತ ಪ್ರದರ್ಶನ ನೀಡಿದ್ದಾರೆ. 2004ರಲ್ಲಿ ಅಜಿತ್​ ಅಗರ್ಕರ್​ ಕೂಡ ಆಸ್ಟ್ರೇಲಿಯಾ ವಿರುದ್ಧ 42 ರನ್​ಗಳಿಗೆ 6 ವಿಕೆಟ್​ ಪಡೆದಿದ್ದರು. (ಏಜೆನ್ಸೀಸ್)