ಕಾರ್ಯಕರ್ತರೇ ಪಕ್ಷದ ಜೀವಾಳ

ಚಡಚಣ: ಕಾರ್ಯಕರ್ತರು ಪಕ್ಷದ ಬೇರುಗಳಿದ್ದಂತೆ, ಅವರ ಪರಿಶ್ರಮದ ಮೇಲೆ ಪಕ್ಷ ಹೆಮ್ಮರವಾಗಿ ಬೆಳೆಯುತ್ತದೆ. ಅವರೇ ನಮ್ಮ ಜೀವಾಳ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆ ಪೂರ್ವಸಿದ್ಧತೆಗಾಗಿ ಸ್ಥಳೀಯ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜನರ ಆಶೀರ್ವಾದದಿಂದ ನಾನು ನಾನು ಸಚಿವನಾಗಿದ್ದೇನೆ. ನನ್ನ ಕೈಲಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದೆಯೂ ನನ್ನನ್ನು ಸಂಸದನಾಗಿ, ಸಚಿವನಾಗಿ ಕೆಲಸ ಮಾಡಲು ಕಾರ್ಯಕರ್ತರು ಬೇರು ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಬೇಕು. ಇನ್ನೊಂದು ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಕಾರ್ಯಕರ್ತರು ಮತದಾರರರ ಮನೆ ಮನೆಗೆ ತೆರಳಿ ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ತಲುಪಿಸಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ, ರಾಜಕೀಯದಲ್ಲಿ ಶುದ್ಧ ಹಸ್ತ, ಪ್ರಾಮಾಣಿಕತೆ ಹಾಗೂ ಪಕ್ಷ ನಿಷ್ಠೆ ಹೊಂದಿರುವ ರಮೇಶ ಜಿಗಜಿಣಗಿಯವರನ್ನು ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆಗೊಳಿಸುವುದು ನಮ್ಮೆಲ್ಲರ ಹೊಣೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ಎಲ್ಲರಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು, ದೇಶದ ಪ್ರಗತಿಗೆ ಮತ್ತೊಮ್ಮೆ ಪ್ರಧಾನ ಮಂತ್ರಿ ಮೋದಿಯವರನ್ನು ಆಯ್ಕೆ ಮಾಡಲು ಕಾರ್ಯಕರ್ತರು ಮುಂದಾಗಬೇಕು ಎಂದರು.

ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ಬಿಜೆಪಿ ಮುಖಂಡರಾದ ಡಾ. ಗೋಪಾಲ ಕಾರಜೋಳ, ಚಿದಾನಂದ ಚಲವಾದಿ, ಪ್ರಕಾಶ ಅಕ್ಕಲಕೋಟ, ರಾಮ ಅವಟಿ, ಕಲ್ಲು ಉಟಗಿ, ರಮೇಶ ಜಿತ್ತಿ, ಸಿದ್ಧರಾಮ ತೆಲಗಾಂವ, ಶಿವಪ್ಪ ಖಟ್ಟಿ, ಪಪಂ ಸದಸ್ಯ ವಿಜಯಕುಮಾರ ಅವಟಿ ಸೇರಿ ಸುತ್ತಲಿನ ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.