ಅಕ್ರಮ ಮರಳು, 5 ಟ್ರ್ಯಾಕ್ಟರ್​ ವಶ

ಚಡಚಣ: ಸಮೀಪದ ಜಿಗಜೇವಣಗಿ ಗ್ರಾಮದ ಪ್ರೌಢಶಾಲೆ ಸಮೀಪದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವ್ಯಕ್ತಿಗಳಿಂದ 10 ಲಕ್ಷ ರೂ. ಮೌಲ್ಯದ 5 ಟ್ರ್ಯಾಕ್ಟರ್ ಹಾಗೂ 20 ಸಾವಿರ ರೂ. ಮೌಲ್ಯದ 5 ಬ್ರಾಸ್ ಮರಳನ್ನು ಚಡಚಣ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಜತ್ತ ತಾಲೂಕಿನ ಸುಸಲಾದ ಗ್ರಾಮದ ಅಮೋಘಸಿದ್ದ ಬಿರಾದಾರ, ಪರಶುರಾಮ ಟೆಂಗಳೆ, ಸುಭಾಸ ಬನ್ನೆ, ಹನುಮಂತ ಬನಪುರೆ ಹಾಗೂ ಕರ್ನಾಟಕ ಮೂಲದ ಜಿಗಜೇವಣಗಿ ಗ್ರಾಮದ ಶಿವಾನಂದ ಸರಸಂಬಿ ಮತ್ತು ಲಮಾಣಿಹಟ್ಟಿ ಗ್ರಾಮದ ಬಸವರಾಜ ಬಿರಾದಾರ ಎಂಬುವರು ಆರೋಪಿಗಳಾಗಿದ್ದು ದಾಳಿ ವೇಳೆ ಪರಾರಿಯಾಗಿದ್ದಾರೆ. ಮಹಾರಾಷ್ಟ್ರದ ಜತ್ತ ತಾಲೂಕಿನ ಸುಸಲಾದ ಗ್ರಾಮದ ಹತ್ತಿರದ ಹಳ್ಳದಿಂದ ನೋಂದಣಿಯಿಲ್ಲದ ಐದು ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಚಡಚಣ ಪಿಎಸ್‌ಐ ಎಸ್.ಎಸ್. ಸಿಮಾನಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಕಾರ್ಯಾಚರಣೆ ವೇಳೆ ಪರಾರಿಯಾದ ಆರೋಪಿಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.