ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ

ಚಡಚಣ: ಭಾರತ ವಿಶ್ವದಲ್ಲಿ ಇನ್ನಷ್ಟು ಗುರುತಿಸಿಕೊಳ್ಳುವಂಥ ಸಧೃಡ ದೇಶವಾಗಬೇಕಾದರೆ ಮತ್ತೊಮ್ಮೆ ಮೋದಿ ಅವರನ್ನು ಭಾರತದ ಪ್ರಧಾನಿಯನ್ನಾಗಿ ಮಾಡುವುದು ಅವಶ್ಯ ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ನಡೆದ ‘ವಿಶ್ವಗುರುವಿನತ್ತ ನನ್ನ ರಾಷ್ಟ್ರ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ವಿಶ್ವದ ಗಮನ ಸೆಳೆದಿರುವುದಕ್ಕೆ ಮೋದಿಯವರ ಪ್ರಾಮಾಣಿಕ ಹಾಗೂ ಜನಪರ ಆಡಳಿತ ಕಾರಣವಾಗಿದೆ. ವಾಜಪೇಯಿ ಅಧಿಕಾರ ಅವಧಿ ಹೊರತುಪಡಿಸಿ ಸ್ವಾತಂತ್ರೃ ನಂತರದಿಂದ 2014 ರವರೆಗೆ ಸಾಕಷ್ಟು ಪಕ್ಷಗಳು ಭಾರತವನ್ನು ಆಳಿದ ವೇಳೆ ಭಾರತಕ್ಕೆ ಭದ್ರತೆ ಇರಲಿಲ್ಲ. ಜಗತ್ತಿನ 70 ರಾಷ್ಟ್ರಗಳನ್ನು ಸುತ್ತಿ ಆ ರಾಷ್ಟ್ರಗಳು ನಮ್ಮ ದೇಶದ ಪರವಾಗಿ ನಿಲ್ಲುವಂತೆ ಮಾಡಿದ ಮಹಾನ್ ಚತುರ ಪ್ರಧಾನಿ ಮೋದಿ ಆಗಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬ ಭಾರತೀಯ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿ ಮೋದಿ ಜನರ ಆರ್ಥಿಕ ಏಳಿಗೆ ಜತೆಗೆ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿದಿನ 17 ಕಿ.ಮೀ. ಹೆದ್ದಾರಿ ನಿರ್ಮಾಣವಾಗುತ್ತಿತ್ತು. ಆದರೆ ಮೋದಿಯವರ ಐದು ವರ್ಷದ ಆಡಳಿತದಲ್ಲಿ ಪ್ರತಿದಿನ 27 ಕಿ.ಮೀ. ಹೆದ್ದಾರಿ ನಿರ್ಮಾಣವಾಗಿರುವುದು ಹೆಮ್ಮೆ ತಂದಿದೆ ಎಂದರು.

ಸಂಗಮೇಶ್ವರ ಸಂಸ್ಥೆ ಅಧ್ಯಕ್ಷ ಜಿ.ಡಿ. ಪಾವಲೆ, ಬಿಜೆಪಿ ಮುಖಂಡ ಡಾ. ಗೋಪಾಲ ಕಾರಜೋಳ, ತಾಪಂ ಮಾಜಿ ಸದಸ್ಯ ರಾಮ ಅವಟಿ, ಮುಖಂಡರಾದ ನಾಗರಾಜ ನಿರಾಳೆ, ಪ್ರಭಾಕರ ನಿರಾಳೆ, ಚೇತನ ನಿರಾಳೆ, ಶ್ರೀಕಾಂತ ಗಂಟಗಲ್ಲ, ದುಂಡೇಶ ಬಡಿಗೇರ, ಪ್ರದೀಪ ಖವೇಕರ ಹಾಗೂ ಯುಜನತೆ ಮತ್ತು ವಿದ್ಯಾರ್ಥಿಗಳು ಇದ್ದರು.