ಕೋರ್ಟ್‌ಗಾಗಿ ಸ್ಥಳ ಪರಿಶೀಲನೆ

ಚಡಚಣ: ಪಟ್ಟಣದಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪನೆಗಾಗಿ ಇಂಡಿ ಹಿರಿಯ ಶ್ರೇಣಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಎ.ಎಸ್ ಹಾಗರಗಿ ಭಾನುವಾರ ವಿವಿಧೆಡೆ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳೀಯ ಸೊಡ್ಡಿ ರಸ್ತೆ ಸಮೀಪದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಆಶ್ರಮ ಶಾಲೆ ವಸತಿ ನಿಲಯ ಹಾಗೂ ದಾನಿ ಶ್ರೀಶೈಲ ಭಮಶೆಟ್ಟಿ ಅವರು ಸರ್ಕಾರಕ್ಕೆ ದಾನವಾಗಿ ನೀಡಿದ 2 ಎಕರೆ ಖಾಲಿ ನಿವೇಶನ ಪರಿಶೀಲಿಸಿ ಕಂದಾಯ ಹಾಗೂ ನ್ಯಾಯಾಂಗ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಚಡಚಣ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಪ್ರಭಾಕರ ನಿರಾಳೆ ಮಾತನಾಡಿ, ಶೀಘ್ರದಲ್ಲಿ ಪಟ್ಟಣದಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪಿಸಿ ಜನರಿಗೆ ಅನುಕೂಲ ಮಾಡಬೇಕು. ಇಲ್ಲಿ ನ್ಯಾಯಾಲಯ ಸ್ಥಾಪಿಸಿದರೆ ಕಕ್ಷಿದಾರರಿಗೆ ಆರ್ಥಿಕ ಹೊರೆ ಕಡಿಮೆಯಾಗುವ ಜತೆಗೆ ತ್ವರಿತ ನ್ಯಾಯದಾನ ಮಾಡಲು ಸಹಾಯಕವಾಗುತ್ತದೆ ಎಂದರು.

ಹಾಸ್ಟೆಲ್ ಅವ್ಯವಸ್ಥೆಗೆ ನ್ಯಾಯಾಧೀಶರು ಕೆಂಡಾ ಮಂಡಲ
ನ್ಯಾಯಾಲಯ ಸ್ಥಾಪನೆಗೆ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಟ್ಟಡ ಪರಿಶೀಲಿಸುತ್ತಿದ್ದ ವೇಳೆ ನ್ಯಾಯಾಧೀಶರು ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿದರು. ಅನೇಕ ವಿದ್ಯಾರ್ಥಿಗಳು ಮಾತನಾಡಿ, ನಮಗೆ ಸರಿಯಾಗಿ ಆಹಾರ ನೀಡುತ್ತಿಲ್ಲ ಎಂದು ದೂರಿದರು. ಇದಕ್ಕೆ ನ್ಯಾಯಾಧೀಶ ಎ.ಎಸ್. ಹಾಗರಗಿ ಕೆಂಡಾಮಂಡಲರಾಗಿ ಸ್ಥಳದಲ್ಲಿದ್ದ ಅಡುಗೆ ಸಹಾಯಕಿಯನ್ನು ತರಾಟೆಗೆ ತಗೆದುಕೊಂಡರು. ಕೂಡಲೇ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ನ್ಯಾಯಾಲಯಕ್ಕೆ ಬರಲು ತಿಳಿಸುವಂತೆ ಅಲ್ಲಿದ್ದ ಸಿಬ್ಬಂದಿಗಳಿಗೆ ತಿಳಿಸಿದರು. ಹಾಸ್ಟೆಲ್ ಸ್ಥಿತಿಗತಿ ಕುರಿತು ಮೇಲಿಂದ ಮೇಲೆ ಪರಿಶೀಲಿಸುವಂತೆ ಸ್ಥಳದಲ್ಲಿದ್ದ ಚಡಚಣ ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಕಟ್ಟು ನಿಟ್ಟಾಗಿ ಸೂಚಿಸಿದರು.