ಕಬ್ಬಿನ ಬಾಕಿ ಹಣ ಪಾವತಿಸಿ

ಚಡಚಣ: ಸಮೀಪದ ಹಾವಿನಾಳ ಇಂಡಿಯನ್ ಶುಗರ್ಸ್‌ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ರೈತರ ಅಂದಾಜು 16 ಕೋಟಿ ರೂ. ಹಣವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ ನೂರಾರು ರೈತರು ಮಂಗಳವಾರ ಕಾರ್ಖಾನೆ ಮುಂಭಾಗ ಪ್ರತಿಭಟಿಸಿದರು.

ರೈತ ಮುಖಂಡ ಅಶೋಕ ಭೈರಗೊಂಡ ಮಾತನಾಡಿ, ಕಾರ್ಖಾನೆಗೆ ಕಬ್ಬು ಕಳುಹಿಸಿ ನಾಲ್ಕು ತಿಂಗಳಾಗಿದ್ದು ರೈತರ ಕಬ್ಬಿನ ಬಾಕಿ ಹಣವನ್ನು ಇದುವರೆಗೂ ಪಾವತಿಸಿಲ್ಲ. ಕಾರ್ಖಾನೆ ಆಡಳಿತ ಮಂಡಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಕಾರ್ಖಾನೆ ಆಡಳಿತ ಮಂಡಳಿ ಕೂಡಲೇ ರೈತರ ಬಾಕಿ ಹಣ ಪಾವತಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಉಮರಾಣಿ ಗ್ರಾಮದ ರೈತ ಮುಖಂಡ ಜಗದೇವಸಾಹುಕಾರ ಭೈರಗೊಂಡ ಮಾತನಾಡಿ, ಒಂದು ವಾರದಲ್ಲಿ ರೈತರ ಬಾಕಿ ಹಣ ಪಾವತಿಸದಿದ್ದಲ್ಲಿ ಕಾರ್ಖಾನೆ ಎದುರು ರೈತರೊಂದಿಗೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮುಖಂಡರಾದ ಸಂತೋಷ ಹುಳ್ಳೆ, ಸಂತೋಷ ಭೈರಗೊಂಡ, ಸಂತೋಷ ಮೇಟೆ, ಸುಭಾಸ ಭೈರಗೊಂಡ, ಜಗದೇವ ಪೀರಗೊಂಡ, ಶ್ರೀಶೈಲ ಬಿರಾದಾರ, ಶ್ರೀಶೈಲ ಪೀರಗೊಂಡ, ಶರಣಪ್ಪ ಬಿರಾದಾರ, ತಮ್ಮಾರಾಯ ಒಡ್ಡರ, ಮಲ್ಲಿಕಾರ್ಜುನ ಭೈರಗೊಂಡ, ಮುರುೇಂದ್ರ ಮಠ ಇತರರು ಇದ್ದರು.