ಪತ್ನಿ ಪರ ಶಾಸಕರ ಮತಯಾಚನೆ

ಚಡಚಣ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಸುನೀತಾ ಚವಾಣ್ ಪರ ಅವರ ಪತಿ ಶಾಸಕ ಡಾ.ದೇವಾನಂದ ಚವಾಣ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪಾದಯಾತ್ರೆ ನಡೆಸಿ ಮತಯಾಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಶಕದಿಂದ ಕ್ಷೇತ್ರದ ಸಂಸದರಾಗಿರುವ ರಮೇಶ ಜಿಗಜಿಣಗಿ ಅವರು ಲೋಕಸಭೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಕೇಂದ್ರದ ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ನೈರ್ಮಲ್ಯ ಖಾತೆ ಸಚಿವರಾಗಿದ್ದರೂ ಕನಿಷ್ಠ ಪಕ್ಷ ತಾವು ಹುಟ್ಟಿ ಬೆಳೆದ ಇಂಡಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಇಂದಿಗೂ ಬಗೆಹರಿಸಿಲ್ಲ ಎಂದು ಹೇಳಿದರು.

1983 ರಿಂದ ಈವರೆಗೂ ಅಧಿಕಾರದಲ್ಲಿದ್ದರೂ ಜಿಲ್ಲೆಗೆ ಏನೂ ಮಾಡಿಲ್ಲ. ಬಹಳ ವರ್ಷಗಳಿಂದ ಮಹಿಳೆಯರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪ್ರಾತಿನಿಧ್ಯ ದೊಕಿರಲಿಲ್ಲ. ಸದ್ಯ ಜೆಡಿಎಸ್ ಮಹಿಳಾ ಅಭ್ಯರ್ಥಿಗೆ ಅವಕಾಶ ಕಲ್ಪಿಸಿದ್ದು, ಪಿಎಚ್‌ಡಿ ಪದವಿ ಪಡೆದಿರುವ ಡಾ. ಸುನೀತಾ ಚವಾಣ್ ಅವರ ಪರ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಅವರ ಗೆಲುವು ಶತಸಿದ್ಧ ಎಂದರು.

ಮುಖಂಡರಾದ ಪ.ಪಂ. ಅಧ್ಯಕ್ಷ ಬಾಬುಗೌಡ ಪಾಟೀಲ, ಕಾಂತುಗೌಡ ಪಾಟೀಲ, ಯುನುಸ್‌ಅಲಿ ಮಕಾನ್‌ದಾರ, ಮುರ್ತುಜಸಾಬ ನದಾಫ್, ಭೀಮಾಶಂಕರ ವಾಳಿಖಿಂಡಿ, ರಾಜಶೇಖರ ಕೋಳಿ, ಪರಮಾನಂದ ಕೋಳಿ, ಶಬ್ಬೀರ್ ಅತ್ತಾರ, ಮೀರಾಸಾಬ ನದಾಫ್, ಮಲ್ಲಿಕಾರ್ಜುನ ಧೋತ್ರೆ, ಚಂದ್ರಕಾಂತ ಸಿಂಧೆ, ದೀಪಕ ಕದಂ, ಶಿವಾನಂದ ಖಟ್ಟಿ ಮತ್ತಿತರರಿದ್ದರು.