ಮುಖ್ಯಶಿಕ್ಷಕ ಅಮಾನತು

ಚಡಚಣ: 48 ಗಂಟೆಗಳಿಗಿಂತ ಹೆಚ್ಚಿನ ಸಮಯ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ ಸಾವಳಸಂಗ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯಶಿಕ್ಷಕ ಕೆ.ಎಲ್. ಕಾಖಂಡಕಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಡಿಡಿಪಿಐ ಎಂ.ಎಂ. ಸಿಂಧೂರ ಆದೇಶ ಹೊರಡಿಸಿದ್ದಾರೆ.

ಸಿಂದಗಿ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಸಾಲ ಪಡೆದು, ಆ ಸಾಲ ಮರಳಿಸಲು ನೀಡಿದ ಚೆಕ್ ಬೌನ್ಸ್ ಆದ ಕಾರಣ ಮಾ. 21ರಿಂದ ಏ. 16ರವರೆಗೆ ಮುಖ್ಯ ಶಿಕ್ಷಕ ಕಾಖಂಡಕಿ ನ್ಯಾಯಾಂಗ ಬಂಧನದಲ್ಲಿ ಇದ್ದದ್ದು, ಹೀಗಾಗಿ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಚಡಚಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾವೀರ ಮಾಲೇಗಾಂವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.