ರಸ್ತೆ ದುರಸ್ತಿಗೆ ಬಾಲಕನ ಆಗ್ರಹ

ಚಡಚಣ: ಚಡಚಣ -ದೇವರನಿಂಬರಗಿ ಗ್ರಾಮದ ರಸ್ತೆ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಸಂಚರಿಸುವಾಗ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸುವಂತೆ ದೇವರನಿಂಬರಗಿ ಗ್ರಾಮದ ಬಾಲಕ ಅಯಾನ್ ಮಕಾನದಾರ್ ಆಗ್ರಹಿಸಿದ್ದಾನೆ.

ಗ್ರಾಮದ ಸತ್ಯ ಸಾಯಿಬಾಬಾ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಅಯಾನ್ ‘ವಿಜಯವಾಣಿ’ ಪ್ರತಿನಿಧಿಗೆ ದೂರವಾಣಿ ಮೂಲಕ ಸಂರ್ಪಸಿ, ನಮ್ಮೂರಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪತ್ರಿಕೆಯಲ್ಲಿ ಈ ಕುರಿತು ಪ್ರಕಟಿಸುವ ಮೂಲಕ ನಮ್ಮ ಸಹಾಯಕ್ಕೆ ಬನ್ನಿ ಎಂದು ಅಂಗಲಾಚಿದ್ದರಿಂದ ನಮ್ಮ ಪ್ರತಿನಿಧಿ ರಸ್ತೆ ಸ್ಥಿತಿಗತಿ ಬಗ್ಗೆ ವರದಿ ಮಾಡಿದ್ದಾರೆ.

ದೇವರನಿಂಬರಗಿ ಗ್ರಾಮವು ಪಟ್ಟಣದಿಂದ 9 ಕಿಮೀ ದೂರವಿದೆ. ಈ ರಸ್ತೆ ಅನೇಕ ವರ್ಷಗಳಿಂದ ಹದಗೆಟ್ಟ ಪರಿಣಾಮ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. ಅದನ್ನು ಅರಿತು ಶಾಸಕ ಡಾ. ದೇವಾನಂದ ಚವಾಣ್ ಅವರು ರಸ್ತೆ ಕಾಮಗಾರಿಗೆ ಮುಂದಾದ ಪರಿಣಾಮ ಗುತ್ತಿಗೆದಾರರು ಪಟ್ಟಣದಿಂದ ಕೇವಲ 6 ಕಿಮೀ ರಸ್ತೆ ನಿರ್ವಿುಸಿ, ಉಳಿದ ರಸ್ತೆಯನ್ನು ಇದ್ದ ಪರಿಸ್ಥಿತಿಯಲ್ಲೇ ಬಿಟ್ಟಿದ್ದಾರೆ.

ಈ ರಸ್ತೆ ಮಾರ್ಗವಾಗಿ ವಿಜಯಪುರಕ್ಕೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಆದರೆ, ಹದಗೆಟ್ಟ ರಸ್ತೆ ಬಂದಾಕ್ಷಣ ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ಶುರುವಾಗುತ್ತಿದೆ. ಈ ರಸ್ತೆ ಗುಂಡಿಗಳಿಂದ ತುಂಬಿದ್ದು, ರಸ್ತೆಗಳಲ್ಲಿ ಚದುರಿ ಬಿದ್ದ ಕಲ್ಲುಗಳಿಂದಾಗಿ ವಾಹನ ಚಾಲನೆ ಹಾಗೂ ಕಾಲ್ನಡಿಗೆ ಸಂಚಾರಕ್ಕೂ ಯೋಗ್ಯವಲ್ಲದ ರಸ್ತೆ ಇದಾಗಿದೆ. ವಾಹನದಲ್ಲಿ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಆತಂಕದಲ್ಲಿ ಪ್ರಯಾಣಿಸುವ ಸ್ಥಿತಿ ಇದೆ.

ಹದಗೆಟ್ಟ ರಸ್ತೆಯಿಂದಾಗಿ ಗ್ರಾಮಸ್ಥರು ಇಷ್ಟೊಂದು ನರಕಯಾತನೆ ಅನುಭವಿಸುತ್ತಿದ್ದರೂ ಕೂಡ ಲೋಕೋಪಯೋಗಿ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ರಸ್ತೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವವರ ವಿರುದ್ಧ ಬಾಲಕ ಅಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆ ದುರಸ್ತಿ ಮಾಡುವರೇ ಕಾದು ನೋಡಬೇಕಾಗಿದೆ.