ಬೆಂಗಳೂರು ಇಂಜಿನಿಯರಿಂಗ್, ವೈದ್ಯಕೀಯ ಸೇರಿ ಇನ್ನಿತರ ವೃತ್ತಿಪರ ಕೋರ್ಸ್ ಸೇರಲು ಬಯಸಿರುವ ಅಭ್ಯರ್ಥಿಗಳು ಯುಜಿಸಿಇಟಿ ಅರ್ಜಿಯಲ್ಲಿ ಕೋರಿರುವ ವಿವಿಧ ಮೀಸಲಾತಿಗಳನ್ನು ಪರಿಗಣಿಸಿ ಆನ್‌ಲೈನ್ ಮೂಲಕ ಪರಿಶೀಲನೆ ನಡೆಸಿದ್ದು, ಅದರ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್‌ನಲ್ಲಿ ಪ್ರಕಟಿಸಿದೆ.
ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿದ ಸ್ಯಾಟ್ಸ್ ಸಂಖ್ಯೆ ಆಧರಿಸಿ ಅಭ್ಯರ್ಥಿಗಳ ವ್ಯಾಸಂಗ, ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗದ ವಿವರಗಳನ್ನು ಪರಿಶೀಲಿಸಲಾಗಿದೆ. ಅದೇ ರೀತಿಯಾಗಿ, ಆರ್‌ಡಿ, ಸಂಖ್ಯೆ ಆಧರಿಸಿ ಮೀಸಲಾತಿ (ಎಸ್‌ಸಿ, ಎಸ್‌ಟಿ, ಪ್ರವರ್ಗ-1, 2ಎ, 2ಬಿ, 3ಎ, 3ಬಿ) 371(ಜೆ), ಧಾರ್ಮಿಕ ಅಲ್ಪಸಂಖ್ಯಾತ, ಎನ್‌ಸಿಎಲ್‌ಸಿ ಮತ್ತು ಇತರೆ ಮಾಹಿತಿಯನ್ನು ಆಯಾ ಇಲಾಖೆಯ ವೆಬ್‌ಸರ್ವೀಸ್ ಮೂಲಕ ಪರಿಶೀಲಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ವಿವರಿಸಿದ್ದಾರೆ.
ಪರಿಶೀಲನೆಯ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನ ಲಿಂಕ್‌ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ನಿಗದಿತ ಲಿಂಕ್‌ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ, ವಿವರಗಳನ್ನು ನೋಡಬಹುದು. ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಲಿಂಕ್ ಅನ್ನು ಸದ್ಯದಲ್ಲಿಯೇ ಸಕ್ರಿಯಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮುಂದಿನ ಹಂತಗಳಾವುವು?
ಅಭ್ಯರ್ಥಿಗಳು ಪ್ರಕಟಿಸಲಾಗುವ ವೇಳಾಪಟ್ಟಿಯನುಸಾರ ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆದ್ಯತಾ ಕ್ರಮದಲ್ಲಿ ಆಸಕ್ತಿ ಇರುವ ಕಾಲೇಜು ಮತ್ತು ಕೋರ್ಸುಗಳ ಪಟ್ಟಿ ಸಿದ್ದಪಡಿಸಿಟ್ಟುಕೊಳ್ಳಬೇಕು; ಮೊದಲನೇ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದ ನಂತರ ಪ್ರಾಧಿಕಾರದ ವೆಬ್‌ಸೈಟಿನ ಲಿಂಕ್‌ನಲ್ಲಿ ಆಯ್ಕೆ (ಆಪ್ಷನ್) ಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು ಎಂದು ಅವರು ವಿವರಿಸಿದರು.
ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ, ಎನ್, ಜೆಡ್ ಗಳನ್ನು ನಮೂದಿಸಿರುವ ಅಭ್ಯರ್ಥಿಗಳಿಗೆ ಆಫ್‌ಲೈನ್ ಪರಿಶೀಲನೆಗೆ ಹಾಜರಾಗಲು ಪ್ರತ್ಯೇಕ ವೇಳಾಪಟ್ಟಿ ನೀಡಿ ಪರಿಶೀಲನೆ ಮಾಡಲಾಗಿರುತ್ತದೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ವೆರಿಫಿಕೇಶನ್ ಸ್ಲಿಪ್ ನೀಡಲಾಗಿದೆ. ಈ ಅಭ್ಯರ್ಥಿಗಳು ಮೇಲಿನ ಲಿಂಕ್‌ಅನ್ನು ಪರಿಶೀಲಿಸಬೇಕಾಗಿಲ್ಲ. ಆ್ಲೈನ್ ಪರಿಶೀಲನೆಗೆ ಗೈರು ಹಾಜರಾಗಿರುವ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಅರ್ಹತೆ ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.