ಒಡಿಶಾಗೆ ತೆರಳಿದ ಸೆಸ್ಕ್ ತಂಡ

ಹಾಸನ: ಫೊನಿ ಚಂಡಮಾರುತ ಆರ್ಭಟದಿಂದ ತತ್ತರಿಸಿರುವ ಒಡಿಶಾದ ವಿದ್ಯುತ್ ಸಂಪರ್ಕಜಾಲ ಮರುನಿರ್ಮಾಣ ಕಾರ್ಯದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಕೈಜೋಡಿಸಿದ್ದು, ಅದಕ್ಕಾಗಿ ಜಿಲ್ಲೆಯ 40 ಸಿಬ್ಬಂದಿ ತಂಡ ಶನಿವಾರ ಒಡಿಶಾಗೆ ಪ್ರಯಾಣ ಬೆಳೆಸಿದೆ.

ಫೊನಿ ಆರ್ಭಟಕ್ಕೆ ಸಿಲುಕಿ ಒಡಿಶಾದ ವಿದ್ಯುತ್ ಸಂಪರ್ಕಜಾಲ ಬಹುತೇಕ ಮುರಿದು ಬಿದ್ದಿದ್ದು, ಹೊಸದಾಗಿ ಗ್ರಾಮಗಳಿಗೆ ಸಂಪರ್ಕ ನೀಡಬೇಕಾಗಿದೆ. ಈ ಕಾರ್ಯಕ್ಕೆ ನೆರವಾಗುವಂತೆ ಅಲ್ಲಿನ ಸರ್ಕಾರ ಮಾಡಿದ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ನಿಗಮಗಳಿಂದಲೂ ತಂಡಗಳನ್ನು ಕಳುಹಿಸಲು ಸೂಚಿಸಿತ್ತು.

ಅದರಂತೆ ಜಿಲ್ಲೆಯ ಹಾಸನ, ಸಕಲೇಶಪುರ, ಅರಸೀಕೆರೆ, ಚನ್ನರಾಯಪಟ್ಟಣ ವಿಭಾಗಗಳಿಂದ ತಲಾ 10 ಜನರ ತಂಡಗಳನ್ನು ಸಿದ್ಧಪಡಿಸಿದ ಅಧಿಕಾರಿಗಳು ರೈಲು ಮೂಲಕ ಒಡಿಶಾಗೆ ಕಳುಹಿಸಿದ್ದಾರೆ.

15 ದಿನಗಳ ಸೇವೆ:
ಒಬ್ಬರು ಜೂನಿಯರ್ ಇಂಜಿನಿಯರ್ ಪ್ರತಿ ತಂಡದ ನೇತೃತ್ವ ವಹಿಸಿದ್ದು, 39 ಪವರ್‌ಮನ್‌ಗಳು 15 ದಿನಗಳ ಕಾಲ ಅಲ್ಲಿನ ಸರ್ಕಾರ ಸೂಚಿಸುವ ಸ್ಥಳದಲ್ಲಿ ವಿದ್ಯುತ್ ಸಂಪರ್ಕಜಾಲ ಮರುನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ. ಮುರಿದ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳು, ವಿದ್ಯುತ್ ಪರಿವರ್ತಕಗಳ ಅಳವಡಿಕೆ, ತಂತಿಗಳನ್ನು ಜೋಡಿಸಿ ಲೈನ್ ಎಳೆಯುವ ಕೆಲಸಗಳನ್ನು ಜಿಲ್ಲೆಯ ಸೆಸ್ಕ್ ತಂಡ ನಿಭಾಯಿಸಲಿದೆ.

ಒಡಿಶಾದ ಸಮಸ್ಯೆಗೆ ಸ್ಪಂದಿಸಲು ಅಲ್ಲಿಗೆ ತೆರಳಬೇಕು ಎಂದು ಅಧಿಕಾರಿಗಳು ಪ್ರಸ್ತಾಪವಿರಿಸಿದಾಗ 39 ಪವರ್‌ಮನ್‌ಗಳು ತಾವಾಗಿಯೇ ಉತ್ಸಾಹದಿಂದ ಮುಂದೆ ಬಂದಿರುವುದು ವಿಶೇಷವಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರತಿವರ್ಷ ಮುರಿದು ಬೀಳುವ ವಿದ್ಯುತ್ ಕಂಬಗಳನ್ನು ಮಳೆ ನಡುವೆಯೇ ಬದಲಾಯಿಸಿ ವಿದ್ಯುತ್ ಸಂಪರ್ಕ ಒದಗಿಸುವ ನಮ್ಮ ತಂಡದ ಅನುಭವ ಚಂಡಮಾರುತದಿಂದ ತತ್ತರಿಸಿರುವ ಒಡಿಶಾದ ಪರಿಹಾರ ಕಾರ್ಯಕ್ಕೆ ನೆರವಾಗಲಿದೆ ಎಂದು ಸೆಸ್ಕ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ಸೂಚನೆಯಂತೆ ಒಡಿಶಾದ ವಿದ್ಯುತ್ ಜಾಲ ಮರುನಿರ್ಮಾಣ ಕಾರ್ಯಕ್ಕೆ ಜಿಲ್ಲೆಯ 4 ವಿಭಾಗಗಳಿಂದ 40 ಜನರ ತಂಡವನ್ನು ಕಳುಹಿಸಲಾಗಿದೆ. ನಮ್ಮ ಪವರ್‌ಮನ್‌ಗಳು ಸ್ವಯಂ ಸ್ಫೂರ್ತಿಯಿಂದ ಈ ಕಾರ್ಯಕ್ಕೆ ಮುಂದೆ ಬಂದಿರುವುದು ವಿಶೇಷ.
ಬಿ.ಎಸ್.ಸುಚೇತನ್, ಸೆಸ್ಕ್ ವೃತ್ತ ಅಧಿಕಾರಿ

ಚಂಡಮಾರುತದ ಹಾನಿಯನ್ನು ಕಣ್ಣಾರೆ ಕಂಡಿದ್ದೇವೆ. ಅಲ್ಲಿನ ಜನರು ಬಿರುಗಾಳಿ, ಮಳೆಯ ನಡುವೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಕೈಲಾದ ಸಹಾಯ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ಒಡಿಶಾದಲ್ಲಿ ಕೆಲಸ ಮಾಡಲು ಹೊರಟಿದ್ದೇವೆ.
ರಮೇಶ್, ಸೆಸ್ಕ್ ಪವರ್‌ಮನ್

Leave a Reply

Your email address will not be published. Required fields are marked *