ಸಿಎಆರ್ ತಂಡಕ್ಕೆ ಚಾಂಪಿಯನ್ ಪಟ್ಟ

ಹುಬ್ಬಳ್ಳಿ: ಕಾರವಾರ ರಸ್ತೆ ಹಳೇ ಸಿಎಆರ್ ಮೈದಾನದಲ್ಲಿ ಮೂರು ದಿನಗಳವರೆಗೆ ನಡೆದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್​ನ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಎಆರ್ ತಂಡ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡರೆ, ದಕ್ಷಿಣ ಉಪ ವಿಭಾಗ ರನ್ನರ್ ಅಪ್ ಪಡೆದುಕೊಂಡಿತು.
ಕ್ರೀಡಾಕೂಟದುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ಐ.ಎಸ್. ದೇಸಾಯಿ ಪುರುಷರ ವಿಭಾಗದ ವೀರಾಗ್ರಣಿ, ಮಹಿಳೆಯರ ವಿಭಾಗದಲ್ಲಿ ಮಂಜುಳಾ ಪಮ್ಮಾರ ವೀರಾಗ್ರಣಿ ಪ್ರಶಸ್ತಿ ಪಡೆದರು.

ಕ್ರೀಡಾ ಸ್ಪೂರ್ತಿ ಅಗತ್ಯ

ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಪ್ರತಿಭಾವಂತರು ಕ್ರೀಡೆಗಳಲ್ಲಿ ಗೆಲ್ಲಬಹುದು ಆದರೆ, ತಂಡದಲ್ಲಿನ ಪ್ರತಿಯೊಬ್ಬರ ಶ್ರಮದಿಂದಾಗಿ ಇಡೀ ತಂಡ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಹಾಗಾಗಿ ಪೊಲೀಸರು ಯಾವತ್ತೂ ಕ್ರೀಡಾಸ್ಪೂರ್ತಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡೆಗಳಲ್ಲಿ ಪಾಲ್ಗೊಂಡವರನ್ನು ನೋಡುತ್ತಿದ್ದರೆ ನನಗೆ ನನ್ನ ಬಾಲ್ಯದ ದಿನಗಳು ನೆನಪಾಗುತ್ತವೆ. ಮಕ್ಕಳ ಹಾಗೆ ಕ್ರೀಡೆಗಳಲ್ಲಿ ಭಾಗವಹಿಸಿ ಗೆಲ್ಲಲು ಎಲ್ಲರೂ ಪ್ರಯತ್ನಿಸಿದ್ದೀರಿ. ಪ್ರಶಸ್ತಿಗಿಂತ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.  ಇದಕ್ಕೂ ಮುನ್ನ ನಡೆದ ಹಗ್ಗ ಜಗ್ಗಾಟದಲ್ಲಿ ಹುಬ್ಬಳ್ಳಿಯ ಸಿ.ಎ.ಆರ್. ತಂಡ ಜಯ ಗಳಿಸಿತು. ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್, ಚಾಂಪಿಯನ್ ತಂಡಕ್ಕೆ ಹತ್ತು ಸಾವಿರ ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 5 ಸಾವಿರ ರೂ. ಬಹುಮಾನ ನೀಡಿದರು. 100 ಮೀಟರ್ ಪುರುಷರ ಓಟದಲ್ಲಿ ಐ.ಎಸ್. ದೇಸಾಯಿ, ಬಸವರಾಜ್ ಹೆಬ್ಬಳ್ಳಿ, ನಿಂಗಪ್ಪ ಲಮಾಣಿ, 100 ಮೀಟರ್ ಮಹಿಳೆಯರ ಓಟದಲ್ಲಿ ಭಾಗ್ಯ ಸಜ್ಜನ್, ಎಂ.ಎಚ್. ಪಮ್ಮಾರ್, ಚನ್ನಮ್ಮ ಗೊಲ್ಲರ್ ಜಯ ಗಳಿಸಿದರು.  ಸೌಹಾರ್ದಯುತವಾಗಿ ನಡೆದ ಮಾಧ್ಯಮ ಮಿತ್ರರ 100 ಮೀಟರ್ ಒಟದಲ್ಲಿ ವಿಜಯ್ ಬಾಕಳೆ, ಈರಪ್ಪ, ಹಾಗೂ ನಾರಾಯಣಗೌಡ ಪಾಟೀಲರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಸ್ವಾಗತಿಸಿದರು. ಡಿಸಿಪಿಗಳಾದ ರವೀಂದ್ರ ಗಡಾದಿ, ಬಿ.ಎಸ್. ನೇಮಗೌಡ, ಎಸ್.ಪಿ. ಶಿವಕುಮಾರ್, ಪಾಲಿಕೆ ಸದಸ್ಯರಾದ ಅಲ್ತಾಫ್ ಕಿತ್ತೂರ, ಮಲ್ಲಿಕಾ ರ್ಜುನ ಹೊರಕೇರಿ, ಮುಖಂಡರಾದ ಮಹೇಶ್ ಟೆಂಗಿನಕಾಯಿ, ಬಾಬಾಜಾನ್ ಮುಧೋಳ, ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.