ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಚುಕ್ಕಾಣಿ ಹಿಡಿದ ಬಳಿಕ ಹಲವು ಬದಲಾವಣೆಗಳನ್ನು ತಂದಿರುವ ಸೌರವ್ ಗಂಗೂಲಿ, ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ. ಆಟಗಾರರ ಗಾಯದ ಸಮಸ್ಯೆ ನಿಭಾಯಿಸುವಲ್ಲಿ ಈಗಾಗಲೆ ಹೆಸರು ಕೆಡಿಸಿಕೊಂಡಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ಪರ್ಯಾಯವಾಗಿ ಇನ್ನಷ್ಟು ಸುಸಜ್ಜಿತವಾದ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಅನ್ನು ಬೆಂಗಳೂರಿನಲ್ಲೇ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಯೋಜನೆ ಸಿದ್ಧಪಡಿಸಿದ್ದಾರೆ.
ಎನ್ಸಿಎ ಹಾಲಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಉಸ್ತುವಾರಿಯಲ್ಲೇ ಸಿಒಇ ಸ್ಥಾಪನೆಗೊಳ್ಳಲಿದೆ. ಎನ್ಸಿಎಗಿಂತ ಸುಧಾರಿತವಾದ ರೀತಿಯಲ್ಲಿ ಸಿಒಇ ಕಾರ್ಯನಿರ್ವಹಿಸಲಿದೆ. ಗಾಯದ ಸಮಸ್ಯೆಗಳನ್ನು ಆಧುನಿಕ ರೀತಿಯಲ್ಲಿ ನಿಭಾಯಿಸಲಿದೆ. ವೈದ್ಯಕೀಯ ಸಂಸ್ಥೆಗಳೊಂದಿಗೂ ಕೈಜೋಡಿಸಲಿದೆ.
ಸಿಒಇಯಲ್ಲಿ 4 ಮೈದಾನಗಳಿರುತ್ತವೆ ಮತ್ತು ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತಿತರ ದೇಶಗಳ ರೀತಿಯ ಪಿಚ್ಗಳಿರುತ್ತವೆ. ಇದಕ್ಕಾಗಿ ಅಲ್ಲಿನ ಮಣ್ಣನ್ನೇ ತಂದು ಪಿಚ್ ನಿರ್ಮಾಣ ಮಾಡಲಾಗುವುದು. ಸಿಒಇಯ ಅಂತಿಮ ರೂಪುರೇಷೆ ಸಿದ್ಧಗೊಳ್ಳಲು ಇನ್ನೂ ಆರು ತಿಂಗಳು ಬೇಕಾಗಬಹುದು ಮತ್ತು ನಂತರದ 2 ವರ್ಷಗಳಲ್ಲಿ ಸಿಒಇ ಕಾರ್ಯನಿರ್ವಹಣೆ ಆರಂಭಿಸಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್ಸಿಎ ಸದ್ಯ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿದ್ದರೆ, ಸಿಒಇ ನಗರದ ಹೊರವಲಯದ ದೇವನಹಳ್ಳಿ ಯಲ್ಲಿ ಬಿಸಿಸಿಐ ಖರೀದಿಸಿರುವ 40 ಎಕರೆ ಜಾಗದಲ್ಲಿ ನಿರ್ಮಾಣ ವಾಗಲಿದೆ. ಸಿಒಇ ಮೈದಾನಗಳನ್ನು ದೇಶೀಯ ಪಂದ್ಯಗಳಿಗೂ ಬಳಸಿಕೊಳ್ಳಲಾಗುವುದು. -ಏಜೆನ್ಸೀಸ್
ಸಿಒಇ ಯೋಜನೆಗೆ ನಿರ್ದಿಷ್ಟ ಮೊತ್ತವನ್ನು ತೆಗೆದಿಟ್ಟಿಲ್ಲ. ಪ್ರತಿ ಕೆಲಸಕ್ಕೂ ಟೆಂಡರ್ ಕರೆಯಲಾಗುವುದು. ಪ್ರಾಥಮಿಕ ನೀಲನಕ್ಷೆಯ ಪ್ರಕಾರ, ಈ ಯೋಜನೆಗೆ ಸುಮಾರು 500 ಕೋಟಿ ರೂ. ವೆಚ್ಚವಾಗಲಿದೆ.
| ಬಿಸಿಸಿಐ ಅಧಿಕಾರಿ